
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.02: ರಾಘವ ಮೆಮೋರಿಯಲ್ ಅಸೋಸಿಯೇಷನ್ 2009ರಿಂದ ಕೊಡುತ್ತಾ ಬಂದಿರುವ ಕನ್ನಡ ಮತ್ತು ತೆಲುಗು ರಂಗಭೂಮಿಯ ಖ್ಯಾತ ಕಲಾವಿದ ” ಬಳ್ಳಾರಿ ರಾಘವ ಪ್ರಶಸ್ತಿ” ಯನ್ನು ಈ ವರ್ಷ ಕನ್ನಡ ರಂಗಭೂಮಿಯ ಬಳ್ಳಾರಿ ಮೂಲದ ಸಧ್ಯ ಮೈಸೂರಿನಲ್ಲಿ ನೆಲಸಿರುವ ಹುಲುಗಪ್ಪ ಕಟ್ಟೀಮನಿ ಹಾಗು ತೆಲುಗು ರಂಗಭೂಮಿಯ ಸಿಕಿಂದ್ರಬಾದ್ ನ ವಲ್ಲೂರು ಶ್ರೀಹರಿರಾವ್ ಅವರಿಗೆ ನೀಡುತ್ತಿದೆ.
ಇಂದು ಮತ್ತು ನಾಳೆ ನಗರದ ರಾಘವಕಲಾ ಮಂದಿರದಲ್ಲಿ ರಾಘವರ 146ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರಶಸ್ತಿಪತ್ರ, 21100 ನಗದು ಮತ್ತು ರಾಘವರ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತದೆ.
ಇಂದು ಸಂಜೆ 6 ಕ್ಕೆ ಕಾರ್ಯಕ್ರಮವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಉದ್ಘಾಟನೆ ಮಾಡಲಿದ್ದು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚೆನ್ನಪ್ಪ ಅವರುಗಳು ಹುಲುಗಪ್ಪ ಕಟ್ಟೀಮನಿ ಇವರಿಗೆ ಕನ್ನಡ ರಾಘವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ..
ನಂತರ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ತಂಡದಿಂದ ಝಕೀರ ನದಾಫ ರಚನೆ ಮತ್ತು ನಿರ್ದೇಶನದ “ನೆಲ ಮುಗಿಲು” ನಾಟಕ ಪ್ರದರ್ಶನಗೊಳ್ಳಲಿದೆ.
ನಾಳೆ ಸಂಜೆ 6 ಕ್ಕೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಕೋಟೆಶ್ವರ ರಾವ್ ಅಧ್ಯಕ್ಷತೆವಹಿಸಲಿದ್ದು. ಅಕಾಶವಾಣಿಯ ಕಲಾವಿದ ಡಾ.ಜೆ.ಶ್ಯಾಮ ಸುಂದರ ಶಾಸ್ತ್ರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶ್ರೀಹರಿರಾವ್ ಇವರಿಗೆ ರಾಘವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನಂತರ ಅನಂತಪುರಂನ ಲಲಿತ ಕಲಾ ಪರಿಷತ್ತು ತಂಡದಿಂದ ದಿ|| ಪಲ್ಲೇಟಿ ಕುಲಶೇಖರ್ ರಚನೆಯ, ಡಾ.ವೆಂಕಟ ಗೊವಾಡ ನಿರ್ದೇಶನದ ತೆಲುಗು ಪೌರಾಣಿಕ ಪದ್ಯ ನಾಟಕ “ಶಕುನಿ” ಪ್ರದರ್ಶನಗೊಳ್ಳಲಿದೆ.






























