
ಕೆಪಿಎಸ್‌ಸಿ ಹಗರಣ
ಬೆಂಗಳೂರು,ಅ.೨-ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕೆಪಿಎಸ್‌ಸಿ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸಿಐಡಿ ತನಿಖೆ ಬಳಿಕ ಇಬ್ಬರು ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮನಿ ಲಾಂಡರಿಂಗ್ ಕೋನದಲ್ಲಿ ತನಿಖೆ ನಡೆಸುತ್ತಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಕೆಪಿಎಸ್‌ಸಿ ಕಚೇರಿಗೆ ನಿನ್ನೆ ಕರೆದೊಯ್ದ ಇಡಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಇರಿಸಲಾಗಿದ್ದ ಸ್ಟ್ರಾಂಗ್ ರೂಂನಲ್ಲಿ ಸ್ಥಳ ಮಹಜರು ನಡೆಸಿದರು. ಬಳಿಕ ನಗರದ ಹೊರವಲಯದಲ್ಲಿರುವ ರೆಸಾರ್ಟ್ ಸೇರಿದಂತೆ ಇತರ ಸ್ಥಳಗಳಲ್ಲೂ ಮಹಜರು ನಡೆಸಲಾಗಿದೆ. ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯ ಪ್ರಕಾರ, ಪರೀಕ್ಷೆ ನಡೆಯುವ ಒಂದು ದಿನ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ತಲುಪಿಸಲಾಗಿತ್ತು ಎಂಬ ಆರೋಪವಿದೆ. ನಂತರ ಕನ್ನಾಳೆ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಉತ್ತರಗಳನ್ನು ಕಂಠಪಾಠ ಮಾಡಿಸಿದ್ದರೆಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಸಂಗ್ರಹಿಸಲಾಗಿದ್ದ ಸ್ಥಳ ಹಾಗೂ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ ಎನ್ನಲಾದ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಮಹಜರು ನಡೆಸಿದ್ದಾರೆ.
ಹಣ ವರ್ಗಾವಣೆ ತನಿಖೆ:
ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ತನಿಖೆ ಮುಂದುವರಿಸಿದೆ. ಈ ಹಿಂದೆ ಆರೋಪಿಗಳಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಇದೀಗ ಪ್ರಕರಣದಲ್ಲಿ ಹವಾಲಾ ಮೂಲಕ ಹಣದ ವಹಿವಾಟು ನಡೆದಿದೆಯೇ ಎಂಬ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಸಮರ್ಪಕವಾಗಿ ಸಹಕರಿಸದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಇಡಿ ತಿಳಿಸಿದೆ.
ಇಡಿ ಕೈಸೇರಿದ ಆರ್‌ಟಿಓ ಡೈರಿ
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ,ಆರ್‌ಟಿಓ ಇಲಾಖೆಯಲ್ಲಿನ ಡೀಲಿಂಗ್‌ಗೆ ಸಂಬಂಧಿಸಿದೆ ಎನ್ನಲಾದ ಡೈರಿಯೊಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಕೈ ಸೇರಿದೆ.
ಆರೋಪಿಯೊಬ್ಬರಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ಡೈರಿಯಲ್ಲಿ ೨೦೧೬ರಲ್ಲಿ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದ ಹರೀಶ್, ಗೋವರ್ಧನ್, ಮಂಜುನಾಥ್, ಪೂಜಾ, ಪದ್ಮಾವತಿ, ಅಶ್ವಿನ್, ಸಂಗಮೇಶ್ ಹಾಗೂ ಮೋಹನ್ ಕುಮಾರ್ ಅವರ ಹೆಸರುಗಳಿವೆ.
೨೦೧೬ರಲ್ಲಿ ಎಂವಿಐ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದರೂ, ವಿವಿಧ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ೨೦೨೩ರಲ್ಲಿ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ.
ಆ ಸಂದರ್ಭದಲ್ಲಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕೃಷ್ಣ ಭಾಜಪೇಯಿ ಕಾರ್ಯನಿರ್ವಹಿಸಿದ್ದರು. ಇದೀಗ ಡೈರಿಯಲ್ಲಿ ಉಲ್ಲೇಖವಾಗಿರುವ ಹೆಸರುಗಳು ಮತ್ತು ನೇಮಕಾತಿ ಪ್ರಕ್ರಿಯೆಯ ನಡುವಿನ ಯಾವುದೇ ಸಂಬಂಧವಿದೆಯೇ ಎಂಬುದನ್ನು ಇಡಿ ಪರಿಶೀಲಿಸುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ, ಡೈರಿಯಲ್ಲಿ ಹೆಸರುಗಳಿರುವ ಎಂವಿಐಗಳು ತಮಗೂ ಆರೋಪಿಯಾಗಿರುವ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡೈರಿಯಲ್ಲಿ ಹೆಸರು ಉಲ್ಲೇಖವಾಗಿರುವುದೇ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆಯಲ್ಲ ಎಂಬುದನ್ನೂ ತನಿಖೆಯ ಸಂದರ್ಭದಲ್ಲಿ ಪರಿಗಣಿಸಬೇಕಿದೆ.
ಡೈರಿಯಲ್ಲಿರುವ ಮಾಹಿತಿಯ ಸತ್ಯಾಸತ್ಯತೆ, ಹಣಕಾಸಿನ ವ್ಯವಹಾರಗಳ ವಿವರ ಹಾಗೂ ನೇಮಕಾತಿ ಪ್ರಕ್ರಿಯೆಯೊಂದಿಗೆ ಅದರ ಸಂಬಂಧದ ಕುರಿತು ಇಡಿ ತನಿಖೆಯಿಂದ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.























