Home ಮುಖಪುಟ ಸುದ್ದಿ ನೈಸ್ ಸಂತ್ರಸ್ತರಿಂದ ಎಚ್‌ಡಿಕೆ ಅಹವಾಲು ಆಲಿಕೆ

ನೈಸ್ ಸಂತ್ರಸ್ತರಿಂದ ಎಚ್‌ಡಿಕೆ ಅಹವಾಲು ಆಲಿಕೆ

ಬೆಂಗಳೂರು, ಅ. ೨- ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ನೈಸ್) ಗಾಗಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರ ಅಹವಾಲುಗಳನ್ನು ಆಲಿಸುವ ಯಾತ್ರೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರಂಭಿಸಿದ್ದಾರೆ.


ಬೆಂಗಳೂರಿನ ಹೊರವಲಯದ ನೈಸ್ ರಸ್ತೆ ಜಂಕ್ಷನ್‌ನ ಮಾದಾವರ ಟೋಲ್‌ನಿಂದ ನೈಸ್ ಸಂತ್ರಸ್ತರ ರೈತರ ಅಹವಾಲು ಆಲಿಕೆಯನ್ನು ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇಂದು ಇಡೀ ದಿನ ಸಂತ್ರಸ್ತ ರೈತರ ಅಹವಾಲುಗಳನ್ನು ಆಲಿಸುವರು.
ಇಂದು ಬೆಳಿಗ್ಗೆ ಮಾದಾವರ ಜಂಕ್ಷನ್‌ನಿಂದ ಆರಂಭವಾಗಿರುವ ಕುಮಾರಸ್ವಾಮಿಯವರ ಪಯಣ ಬಾಣಸಂದ್ರದಲ್ಲಿ ಕೊನೆಗೊಳ್ಳಲಿದೆ.


ನೈಸ್ ಯೋಜನೆಗೆ ಭೂಮಿ ಕಳೆದುಕೊಂಡಿರುವ ತೋಟದಗುಡ್ಡದಹಳ್ಳಿ, ಅಂಚೆಪಾಳ್ಯ, ತಿರುಮಲಾಪುರ, ಕೆ.ಜಿ.ಶ್ರೀಕಂಠಪುರಂ, ಗಂಗೊಂಡನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ, ಕೊಡಿಗೇಹಳ್ಳಿ, ರಾಮಸಂದ್ರ, ಬೊಮ್ಮಘಟ್ಟ, ದೊಡ್ಡಬಸ್ತಿ, ಚಿಕ್ಕಬಸ್ತಿ, ಚಿಕ್ಕನಹಳ್ಳಿ, ಕೆಂಗೇರಿ, ದೊಡ್ಡತೂಗೂರು, ಚಿಕ್ಕತೂಗೂರು, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಬೇಗೂರು, ಸೋಂಪುರ, ವರಾಹಸಂದ್ರ, ಪಿ.ಎಂ. ಕಾವಲ್, ಹೆಚ್. ಗೊಲ್ಲಹಳ್ಳಿ, ಚನ್ನವೀರಾಯನಪಾಳ್ಯ, ರಾಚನಮಡು, ತಲಘಟ್ಟಪುರ, ಎಮ್ಮಗೆಪುರ, ಗೋಣಿಪುರ, ಸೀಗೆಹಳ್ಳಿ, ತಿಪ್ಪೂರು, ಗಾಣಸಂದ್ರ ಈ ಗ್ರಾಮಗಳ ರೈತರ ಅಹವಾಲುಗಳನ್ನು ಕುಮಾರಸ್ವಾಮಿ ಆಲಿಸಲಿದ್ದಾರೆ.


ನೈಸ್ ಯೋಜನೆಗೆ ಭೂಮಿ ಕಳೆದುಕೊಂಡಿರುವ ನೊಂದ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಲು ಹೊರಟಿದ್ದೇನೆ. ನೊಂದ ಜನರನ್ನು ನಾನು ಖುದ್ದು ಭೇಟಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಸಾರ್ವಜನಿಕರು, ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಎಲ್ಲಕ್ಕಿಂತ ಮಿಗಿಲಾಗಿ ಭೂಮಿ ಕಳೆದುಕೊಂಡ ಜನ ನನ್ನ ಈ ಪಯಣದಲ್ಲಿ ಭಾಗಿಯಾಬೇಕು ಎಂದು ವಿನಂತಿಸುತ್ತೇನೆ. ಒಗ್ಗಟ್ಟಾಗಿ ಹೋರಾಟ ನಡೆಸೋಣ. ಗುರಿ ಮುಟ್ಟುವ ತನಕ ವಿರಮಿಸುವುದು ಬೇಡ ಎಂದು ಅವರು ಹೇಳಿದ್ದಾರೆ.
ನಮ್ಮ ಭೂಮಿ, ನಮ್ಮ ಹಕ್ಕು, ನಥೀಂಗ್ ನೈಸ್ ಎಂಬ ಹ್ಯಾಷ್ ಟ್ಯಾಗ್‌ನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕುಮಾರಸ್ವಾಮಿ ಬಳಸಿದ್ದಾರೆ

ರೈತರ ಜೊತೆ ಚೆಲ್ಲಾಟವೇಕೆ


ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಗ್ಗೆ ನನಗೆ ಯಾವುದೇ ಅಸೂಯೆ ಇಲ್ಲ. ಆದರೆ ಮುಖ್ಯಮಂತ್ರಿ ಆದ ಬಳಿಕವೂ ಯಾಕೆ ರೈತರೊಂದಿಗೆ ಚೆಲ್ಲಾಟ ಆಡುತ್ತೀರಿ?” ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು ನೈಸ್ ಸಂತ್ರಸ್ತ ರೈತರ ಅಹವಾಲು ಕಾರ್ಯಕ್ರಮವನ್ನು ನಡೆಸಿರುವ ಮಾದವಾರದಲ್ಲಿ, ಇಂದು ಬೆಳಿಗ್ಗೆ ಮಾತನಾಡಿ”ನಾನು ಹೊರಗಿನಿಂದ ಬಂದವನು ಎನ್ನುತ್ತಾರೆ. ನಾವೇನು ಪಾಕಿಸ್ತಾನದಿಂದ ಬಂದಿದ್ದೇವಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.


ತಮ್ಮ ಭೂಮಿ ವಿಚಾರವಾಗಿ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, “ಕೇತಗಾನಹಳ್ಳಿಯಲ್ಲಿ ೪೪ ಎಕರೆ ಭೂಮಿಯನ್ನು ನಾನು ರಾಜಕಾರಣಕ್ಕೆ ಬರುವ ಮೊದಲೇ ತೆಗೆದುಕೊಂಡಿದ್ದೇನೆ. ಒಂದು ಇಂಚು ಭೂಮಿಯನ್ನೂ ರೈತರಿಗೆ ತೊಂದರೆ ಕೊಟ್ಟು ಪಡೆದಿದ್ದರೆ, ನಾನು ಚುನಾವಣೆಯಿಂದಲ್ಲ, ಸಾರ್ವಜನಿಕವಾಗಿಯೇ ನೇಣು ಹಾಕಿಕೊಳ್ಳುತ್ತೇನೆ” ಎಂದು ಸವಾಲು ಹಾಕಿದರು.


ವೀರಶೈವ ಸಮಾಜದವನಾಗಿರುವ ತನ್ನನ್ನು, “ನಾನು ಹಣ ಮಾಡುತ್ತೇನೆ” ಎಂದು ದೇವೆಗೌಡರು ವಿರೋಧ ಮಾಡುತ್ತಿದ್ದಾರೆ ಎಂದು ಅಶೋಕ್ ಖೇಣಿ ಬಿಂಬಿಸಿಕೊಂಡು ಬಂದರು ಎಂದು ಆರೋಪಿಸಿದರು ಈಗ ನಮ್ಮ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರೈತರು ಒಗ್ಗಟ್ಟಿನಿಂದ ಇದ್ದರೆ, ನನ್ನ ಹೋರಾಟ ಹೀಗೆಯೇ ಇರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.


“ನಾನು ಯಾವುದೇ ಆಮೀಷಕ್ಕೆ ಒಳಗಾಗುವುದಿಲ್ಲ. ನನ್ನ ಹೋರಾಟ ಮುಂದುವರಿಯಲಿದೆ” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.