Home ಮುಖಪುಟ ಸುದ್ದಿ ಫ್ಲೈದುಬೈ ದಾಳಿಗೆ ಇರಾನ್ ನಂಟು- ಟ್ರಂಪ್

ಫ್ಲೈದುಬೈ ದಾಳಿಗೆ ಇರಾನ್ ನಂಟು- ಟ್ರಂಪ್

ದುಬೈ, ಅ. ೨: ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣ ಮುಂದುವರಿದಿರುವ ಬೆನ್ನಲ್ಲೇ, ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಸಹಪೈಲಟ್ ನಡೆಸಿದ ದಾಳಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿ ನಡೆಸಿದ ಓಮನ್ ಮೂಲದ ಸಹಪೈಲಟ್‌ಗೆ ಇರಾನ್‌ನೊಂದಿಗೆ ಸಂಪರ್ಕವಿರಬಹುದೆಂಬ ಮಾಹಿತಿ ತನಿಖೆಯಿಂದ ಹೊರಬರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಲಭ್ಯವಾಗುತ್ತಿರುವ ಮಾಹಿತಿಯ ಆಧಾರದ ಮೇಲೆ ಸಹಪೈಲಟ್‌ಗೆ ಇರಾನ್ ನಂಟಿರುವ ಸಾಧ್ಯತೆ ಇದೆ ಎಂದು ಹೇಳಿದರು. ಆದರೆ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ದಾಳಿಯ ನಿಖರ ಉದ್ದೇಶ ಹಾಗೂ ಹಿನ್ನೆಲೆ ಸ್ಪಷ್ಟವಾಗಬೇಕಿದೆ ಎಂದು ಅವರು ತಿಳಿಸಿದರು.

ಬೋಯಿಂಗ್ ೭೩೭ ಮ್ಯಾಕ್ಸ್ ವಿಮಾನವು ಸುಮಾರು ೩೬ ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಸಹಪೈಲಟ್ ಏಕಾಏಕಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ್ದಾನೆ. ಇರಿತದಿಂದ ಗಂಭೀರವಾಗಿ ಗಾಯಗೊಂಡರೂ ಮಚ್ಚರ್ ಪರಿಸ್ಥಿತಿಯ ನಿಯಂತ್ರಣ ಕಳೆದುಕೊಳ್ಳಲಿಲ್ಲ.ಕಾಕ್‌ಪಿಟ್ ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಗಾಯಗೊಂಡಿದ್ದ ಮಚ್ಚರ್ ಬಾಗಿಲು ತೆರೆದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರು ಕಾಕ್‌ಪಿಟ್‌ಗೆ ಧಾವಿಸಿ ದಾಳಿಕೋರನನ್ನು ನಿಯಂತ್ರಿಸಲು ಮುಂದಾದರು.

ವಿಮಾನದಲ್ಲಿದ್ದ ಪ್ರಯಾಣಿಕ ಯಾನಿವ್ ಹಯೂನ್ ಮೊದಲು ಕಾಕ್‌ಪಿಟ್‌ಗೆ ಧಾವಿಸಿ ದಾಳಿಕೋರನನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಳಿಕ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಪೈಲಟ್‌ಗಳಿಗೆ ನೆರವಾದರು.ಈ ವೇಳೆ ವಿಮಾನ ವೇಗವಾಗಿ ಎತ್ತರ ಕಳೆದುಕೊಂಡು ಸುಮಾರು ೧೬ ಸಾವಿರ ಅಡಿವರೆಗೆ ಇಳಿದಿತ್ತು. ಪರಿಸ್ಥಿತಿ ಕೈಮೀರುವ ಮುನ್ನ ಕರ್ತವ್ಯದಲ್ಲಿದ್ದ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡರು.

ನಂತರ ವಿಮಾನವನ್ನು ವಾಯವ್ಯ ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ ೧೭೪ ಪ್ರಯಾಣಿಕರ ಪೈಕಿ ೧೭೦ ಮಂದಿ ಇಸ್ರೇಲ್ ಪ್ರಜೆಗಳಾಗಿದ್ದರು ಎಂದು ವರದಿಯಾಗಿದೆ.

ಘಟನೆ ಕುರಿತು ತನಿಖೆ ಮುಂದುವರಿದಿದ್ದು, ಇದು ಭಯೋತ್ಪಾದಕ ಸಂಚಿನ ಭಾಗವೇ ಅಥವಾ ವೈಯಕ್ತಿಕ ಕೃತ್ಯವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಫ್ಲೈದುಬೈ ಕಾರ್ಯನಿರ್ವಹಿಸುವ ಸಂಯುಕ್ತ ಅರಬ್ ಎಮಿರೇಟ್ಸ್ ಕೂಡ ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದೆ.

ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಘಟನೆಗೆ ಜಿಹಾದಿ ಭಯೋತ್ಪಾದನೆಯ ಯತ್ನ’ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ ದಾಳಿಯ ಹಿಂದಿನ ನಿಖರ ಉದ್ದೇಶವನ್ನು ಅಧಿಕೃತ ತನಿಖೆ ಪೂರ್ಣಗೊಳ್ಳುವವರೆಗೆ ಖಚಿತಪಡಿಸಲಾಗಿಲ್ಲ.

ಗಂಭೀರವಾಗಿ ಗಾಯಗೊಂಡಿದ್ದರೂ ಪರಿಸ್ಥಿತಿಯನ್ನು ನಿಭಾಯಿಸಿ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರಿಗೆ ದಾಳಿಕೋರನನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಮಚ್ಚರ್ ಅವರು ಈ ಹಿಂದೆ ಸ್ಪೈಸ್‌ಜೆಟ್‌ನಲ್ಲಿ ಸುಮಾರು ೧೧ ವರ್ಷಗಳ ಕಾಲ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಚ್ಚರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ಅವರು ತೋರಿದ ಪ್ರತಿರೋಧದಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು ಹಾಗೂ ಭೀಕರ ಮಧ್ಯಾಕಾಶ ದುರಂತ ತಪ್ಪಿತು ಎಂದು ನೆತನ್ಯಾಹು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಚ್ಚರ್ ಅವರ ಧೈರ್ಯವನ್ನು ಶ್ಲಾಘಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಅವರು ಪರಿಸ್ಥಿತಿಯನ್ನು ನಿಭಾಯಿಸಿದರು ಎಂದು ಹೇಳಿದ್ದಾರೆ.ಘಟನೆಯ ಹಿನ್ನೆಲೆಯಲ್ಲಿ ವಿಮಾನ ಭದ್ರತೆ, ಕಾಕ್‌ಪಿಟ್ ಸುರಕ್ಷತೆ ಹಾಗೂ ಸಹಪೈಲಟ್‌ನ ಹಿನ್ನೆಲೆಯ ಕುರಿತು ತನಿಖೆ ಮತ್ತಷ್ಟು ತೀವ್ರಗೊಂಡಿದೆ.