
ಕಲಬುರಗಿ,ಅ.2: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ), ಕಲಬುರಗಿಯ ವೇದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಸ್ವಚ್ಛತಾಹಿಸೇವಾ ಅಭಿಯಾನದ ಅಂಗವಾಗಿ ಸಫಾಯಿ ಕರ್ಮಚಾರಿಗಳಿಗಾಗಿ “ಸಫಾಯಿ ಕರ್ಮಚಾರಿ ಸುರಕ್ಷಾ ಏವಂ ಸಮ್ಮಾನ್ ಶಿಬಿರ”ವನ್ನು ಸಿಯುಕೆ ಆವರಣದಲ್ಲಿ ಆಯೋಜಿಸಿತ್ತು.
ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಆರೋಗ್ಯ ಜಾಗೃತಿ ಹಾಗೂ ಆರೋಗ್ಯ ಕಿಟ್‍ಗಳ ವಿತರಣೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, ಕ್ಯಾಂಪಸ್ ಸ್ವಚ್ಛತೆ ಕಾಪಾಡುವಲ್ಲಿ ಸಫಾಯಿ ಕರ್ಮಚಾರಿಗಳ ಸೇವೆಯನ್ನು ಶ್ಲಾಘಿಸಿದರು.
ಸಿಯುಕೆ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಮಾತನಾಡಿ, ಆರೋಗ್ಯಕರ ಜೀವನ ಮತ್ತು ಪರಿಸರಕ್ಕೆ ಸ್ವಚ್ಛತೆ ಹಾಗೂ ವೈಯಕ್ತಿಕ ನೈರ್ಮಲ್ಯ ಅತ್ಯಗತ್ಯ ಎಂದು ಹೇಳಿದರು. ವೈಯಕ್ತಿಕ ಸ್ವಚ್ಛತೆ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಮನೆ, ಕೆಲಸದ ಸ್ಥಳ ಮತ್ತು ಕ್ಯಾಂಪಸ್ ಸ್ವಚ್ಛವಾಗಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿ.ವಿ.ಯ ಸಹ ಪ್ರಾಧ್ಯಾಪಕರು ಹಾಗೂ ಸ್ವಚ್ಛತಾ ಹಿ ಸೇವಾ ನೋಡಲ್ ಅಧಿಕಾರಿಗಳಾದ ಡಾ. ಗಣಪತಿ ಬಿ. ಸಿನ್ನೂರು ಅವರು ವೈಯಕ್ತಿಕ ನೈರ್ಮಲ್ಯ ಹಾಗೂ ಸ್ವಚ್ಛ ಪರಿಸರದ ಮಹತ್ವವನ್ನು ವಿವರಿಸಿ, “ಉತ್ತಮ ಆರೋಗ್ಯವು ಸ್ವಚ್ಛತೆಯಿಂದಲೇ ಆರಂಭವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಯುಕೆ ವೈದ್ಯಾಧಿಕಾರಿ ಡಾ. ಜ್ಯೋತಿ ತೆಗನೂರು, ಡಾ. ರೋಹಿತ್ ಕುಮಾರ್ ಬಿ., ವೇದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ವೀರೇಶ್, ಡಾ. ಶ್ರದ್ಧಾ ಸೇರಿದಂತೆ ವೈದ್ಯಕೀಯ ತಂಡದ ಸದಸ್ಯರು ಭಾಗವಹಿಸಿದ್ದರು.
ಸಿಯುಕೆ ಸಫಾಯಿ ಕರ್ಮಚಾರಿಗಳು ಹಾಗೂ ಕಡಗಂಚಿ, ಸುಂಟನೂರು ಮತ್ತು ವಿವಿಧ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಅವರ ಆರೋಗ್ಯ ತಪಾಸಣೆ, ವೈದ್ಯಕೀಯ ಸಮಾಲೋಚನೆ ಮತ್ತು ಉಚಿತ ಔಷಧಿಗಳ ಸೌಲಭ್ಯವನ್ನು ಪಡೆದುಕೊಂಡರು.
ಸ್ವಚ್ಛ ಹಾಗೂ ಆರೋಗ್ಯಕರ ಕ್ಯಾಂಪಸ್ ನಿರ್ವಹಣೆಯಲ್ಲಿ ಸಫಾಯಿ ಕರ್ಮಚಾರಿಗಳು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ, 80 ಮಂದಿ ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ಮತ್ತು ಸ್ವಚ್ಛತಾ ಕಿಟ್‍ಗಳನ್ನು ವಿತರಿಸಲಾಯಿತು.
ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಗೀತ ಮತ್ತು ಲಲಿತಕಲೆಗಳ ವಿಭಾಗದ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ರಾಷ್ಟ್ರಗೀತೆಯ ಗಾಯನದೊಂದಿಗೆ ಮುಕ್ತಾಯಗೊಂಡಿತು.






















