
ಕಲಬುರಗಿ,ಅ.2: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಂಪ್ಯೂಟರ್ ವಿಜ್ಞಾನಗಳ ನಿಕಾಯ ಹಾಗೂ ಸಂಸ್ಥೆಯ ನಾವೀನ್ಯತಾ ಮಂಡಳಿ (ಐಐಸಿ) ವತಿಯಿಂದ ಕೃತಕ ಬುದ್ಧಿಮತ್ತೆ (ಎಐ), ಡೇಟಾ ವಿಜ್ಞಾನ, ನಾವೀನ್ಯತೆ ಹಾಗೂ ಮಾನವ ಎಐ ಸಂಬಂಧದ ಕುರಿತು ಎರಡು ದಿನಗಳ ಶೈಕ್ಷಣಿಕ ಕಾರ್ಯಕ್ರಮವನ್ನು ಸೆ. 29-30 ರಂದು ಸಿಯುಕೆ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ನಾವೀನ್ಯತೆಯ ಮಹತ್ವವನ್ನು ಒತ್ತಿಹೇಳಿ, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ಆಲೋಚನೆಗಳನ್ನು ಅರ್ಥಪೂರ್ಣ ಮತ್ತು ಸಾಮಾಜಿಕವಾಗಿ ಪ್ರಸ್ತುತವಾದ ಪರಿಹಾರಗಳಾಗಿ ರೂಪಿಸುವಂತೆ ಕರೆ ನೀಡಿದರು. ವಿಶ್ವವಿದ್ಯಾಲಯದ ನಾವೀನ್ಯತಾ ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ‘ಸೇವಾ ಪೆÇೀರ್ಟಲ್’ ನಾವೀನ್ಯತೆ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದೆ ಎಂದು ತಿಳಿಸಿದರು.
ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಂಪ್ಯೂಟರ್ ಮತ್ತು ಸಿಸ್ಟಮ್ಸ್ ಸೈನ್ಸಸ್ ನಿಕಾಯದ ಪೆÇ್ರ. ಟಿ.ವಿ.ವಿಜಯ್ ಕುಮಾರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, “ದತ್ತಾಂಶದಿಂದ ಜ್ಞಾನದವರೆಗೆ: ಎಐ ಮತ್ತು ಡೇಟಾ ವಿಜ್ಞಾನದ ಶಕ್ತಿ” ಹಾಗೂ “ಪ್ರಕೃತಿಯಿಂದ ಪ್ರೇರಿತ ಕಂಪ್ಯೂಟಿಂಗ್” ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಈ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಭವಿಷ್ಯದ ಸಾಧ್ಯತೆಗಳ ಕುರಿತು ವಿವರಿಸಿದರು.
ಎರಡನೇ ದಿನ “ಎಐ ಅನ್ನು ಮಾನವೀಕರಿಸುವುದು ಬುದ್ಧಿಶಕ್ತಿಯನ್ನು ಅಮಾನವೀಯಗೊಳಿಸುತ್ತದೆಯೇ?” ಎಂಬ ವಿಷಯದ ಕುರಿತು ಅಂತರ್‍ಶಿಸ್ತೀಯ ಸಂವಾದ ನಡೆಯಿತು. ಮಾನವನಂತೆಯೇ ಕಾರ್ಯನಿರ್ವಹಿಸುವ ಎಐ ವ್ಯವಸ್ಥೆಗಳ ಬೌದ್ಧಿಕ, ನೈತಿಕ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ತಜ್ಞರು ಚರ್ಚಿಸಿದರು.
ಸಂವಾದದಲ್ಲಿ ಪೆÇ್ರ. ಟಿ. ವಿ. ವಿಜಯ್ ಕುಮಾರ್, ಪೆÇ್ರ. ಅಮರೇಂದ್ರ ಮತ್ಸಾ, ಪೆÇ್ರ. ವಿಜಯೇಂದ್ರ ಪಾಂಡೆ, ಡಾ. ರೋಹಿತ್ ಕುಮಾರ್ ಬಿ., ಡಾ. ಆಸ್ಥಾ, ಪೆÇ್ರ. ಪವಿತ್ರಾ ಆಲೂರು ಹಾಗೂ ಡಾ. ನಾಗರಾಜ್ ವಿ. ಧಾರವಾಡಕರ್ ಭಾಗವಹಿಸಿದ್ದರು. ಪ್ಯಾನಲ್ ಸದಸ್ಯರು ಮಾನವ ಬುದ್ಧಿಶಕ್ತಿ, ಸೃಜನಶೀಲತೆ ಮತ್ತು ಎಐ ನಡುವಿನ ಸಂಬಂಧದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಳಿಕ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಹಾಗೂ ಅಧ್ಯಾಪಕರೊಂದಿಗೆ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಿಯುಕೆಯ ಕಂಪ್ಯೂಟರ್ ವಿಜ್ಞಾನಗಳ ನಿಕಾಯದ ಡೀನ್ ಪೆÇ್ರ. ಆರ್. ಎಸ್. ಹೆಗಡಿ, ಐಕ್ಯೂಎಸಿ ನಿರ್ದೇಶಕ ಹಾಗೂ ಎಂಜಿನಿಯರಿಂಗ್ ನಿಕಾಯದ ಡೀನ್ ಪೆÇ್ರ. ಅಮರೇಂದ್ರ ಮತ್ಸಾ, ಭೌತ ವಿಜ್ಞಾನಗಳ ನಿಕಾಯದ ಡೀನ್ ಪೆÇ್ರ. ರಾಜೀವ್ ಶೇಷ ಜೋಶಿ, ಸಾಮಾಜಿಕ ಮತ್ತು ವರ್ತನಾ ವಿಜ್ಞಾನಗಳ ನಿಕಾಯದ ಡೀನ್ ಪೆÇ್ರ. ಪವಿತ್ರಾ ಆಲೂರು ಹಾಗೂ ಸಿಯುಕೆ ಸಂಸ್ಥೆಯ ನಾವೀನ್ಯತಾ ಮಂಡಳಿಯ ನೋಡಲ್ ಅಧಿಕಾರಿ ಡಾ. ರೋಹಿತ್ ಕುಮಾರ್ ಬಿ. ಸೇರಿದಂತೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಂದೇಮಾತರಂ ಗೀತೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.






















