
ಅಮರಾವತಿ, ಅ.2: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಸಮೃದ್ಧಿ ಎಕ್ಸ್‍ಪ್ರೆಸ್‍ವೇಯ ಚಾನೆಲ್ ಸಂಖ್ಯೆ 97ರ ಬಳಿ ಈ ದುರ್ಘಟನೆ ಸಂಭವಿಸಿದೆ.
ಶೇಗಾಂವ್‍ನಿಂದ ದುರ್ಗಾದೇವಿಯ ವಿಗ್ರಹವನ್ನು ಹೊತ್ತು ವಾರ್ಧಾಗೆ ತೆರಳುತ್ತಿದ್ದ ಭಕ್ತರಿದ್ದ ಬೊಲೆರೊ ಪಿಕಪ್ ವಾಹನಕ್ಕೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿದೆ.
ಅಪಘಾತದಲ್ಲಿ ಒಟ್ಟು 21 ಮಂದಿ ಗಾಯಗೊಂಡಿದ್ದಾರೆ. ಇವರ ಪೈಕಿ 14ರಿಂದ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ನಾಲ್ಕರಿಂದ ಐವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಧಾಮಣಗಾಂವ್ ರೈಲ್ವೆ ಪೆÇಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳೀಯರು ಹಾಗೂ ಪತ್ರಕರ್ತರು ಕೂಡ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ನೆರವಾದರು.ಗಾಯಗೊಂಡವರನ್ನು ಆರಂಭದಲ್ಲಿ ಧಾಮಣಗಾಂವ್ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ವಾರ್ಧಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಅಮರಾವತಿ ಗ್ರಾಮಾಂತರ ಪೆÇಲೀಸ್ ವರಿಷ್ಠಾಧಿಕಾರಿ ನಿಕೇತನ ಕದಮ್ ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದರು.
ಲಾರಿ ಮತ್ತು ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಮೃದ್ಧಿ ಎಕ್ಸ್‍ಪ್ರೆಸ್‍ವೇಯಲ್ಲಿ ವಾಹನಗಳ ವೇಗ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ಹಲವು ಅಂಶಗಳ ಕುರಿತು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.ಮೃತರು ಹಾಗೂ ಗಾಯಾಳುಗಳ ಸಂಪೂರ್ಣ ವಿವರಗಳನ್ನು ಪೆÇಲೀಸರು ಕಲೆಹಾಕುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.






















