
ಕಲಬುರಗಿ,ಜು.25: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಮಾಜ ಕಾರ್ಯ ವಿಭಾಗದ ವತಿಯಿಂದ “ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆ” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಸಮಾಜ ಕಾರ್ಯ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಗ್ರಾಮ ಸಮೀಕ್ಷೆಗಳು, ಕ್ಷೇತ್ರ ಭೇಟಿ, ದತ್ತಾಂಶ ಸಂಗ್ರಹಣೆ, ಸಮುದಾಯಗಳೊಂದಿಗೆ ಸಂವಹನ ಹಾಗೂ ಸಮುದಾಯ ಆಧಾರಿತ ಸಂಶೋಧನೆಗಳ ಮೂಲಕ ತಳಮಟ್ಟದ ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳು ಮತ್ತು ಸಂಶೋಧನಾ ವರದಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ನೀತಿಗಳನ್ನು ರೂಪಿಸಲು ಅಮೂಲ್ಯ ಮಾಹಿತಿಯನ್ನು ಒದಗಿಸುತ್ತವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಸಮಾಜ ಕಾರ್ಯ ಸಂಶೋಧಕರು ಮತ್ತು ವೃತ್ತಿಪರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಸಂಶೋಧನೆಗಳು ಸರ್ಕಾರದ ಉತ್ತಮ ಆಡಳಿತಕ್ಕೆ ಬಲ ತುಂಬುತ್ತವೆ ಎಂದು ಅವರು ಹೇಳಿದರು.
ಹೀಗಾಗಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸಮಾಜದ ಅಗತ್ಯಗಳಿಗೆ ಸ್ಪಂದಿಸುವ, ನೈತಿಕ ಮೌಲ್ಯಗಳನ್ನು ಒಳಗೊಂಡ ಹಾಗೂ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುವ ಗುಣಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಚಾಲ್ರ್ಸ್ ಸ್ಟರ್ಟ್ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರೂ, ಸಿಯುಕೆಯ ಸಂದರ್ಶಕ ಪ್ರಾಧ್ಯಾಪಕರೂ ಆಗಿರುವ ಪೆÇ್ರ. ಮನೋಹರ್ ಪವಾರ್ ಅವರು ವಿಶೇಷ ಉಪನ್ಯಾಸ ನೀಡಿದರು. ಸಂಶೋಧನಾ ವಿಧಾನ, ಶೈಕ್ಷಣಿಕ ಬರವಣಿಗೆ, ಪ್ರಕಟಣಾ ನೀತಿಶಾಸ್ತ್ರ ಹಾಗೂ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಗಳಲ್ಲಿ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮಹತ್ವದ ಕುರಿತು ಅವರು ಉಪನ್ಯಾಸ ನೀಡಿದರು. ಸಂಶೋಧನಾ ಸಮಗ್ರತೆಯನ್ನು ಕಾಪಾಡಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ಪರಿಣಾಮಕಾರಿ ಶೈಕ್ಷಣಿಕ ಕೃತಿಗಳನ್ನು ರಚಿಸುವಂತೆ ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಹಾಗೂ ವರ್ತನಾ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಪವಿತ್ರಾ ಆರ್. ಆಲೂರ್, ಪೆÇ್ರ. ಚನ್ನವೀರ್ ಆರ್. ಎಂ., ಡಾ. ಚಿತ್ಕಲಾ ವೆಂಕರೆಡ್ಡಿ, ಡಾ. ಎಂ. ಶಿವಮೂರ್ತಿ, ಡಾ. ಹರೀಶ್, ಡಾ. ರವೀಂದರ್ ಕುಮಾರ್ ಹಾಗೂ ಡಾ. ಶ್ರೀನಿವಾಸ್ ಡಿ. ಸೇರಿದಂತೆ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ. ಲಕ್ಷ್ಮಣ ಜಿ ಸ್ವಾಗತಿಸಿದರು. ಡಾ. ಎಂ. ಶಿವಮೂರ್ತಿ ವಂದಿಸಿದರು. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡು ರಾಷ್ಟ್ರಗೀತೆಯೊಂದಿಗೆ ಸಮಾರೋಪಗೊಂಡಿತು.































