Home ಜಿಲ್ಲೆ ಶಿವಮೊಗ್ಗ ‘ಗೃಹಜ್ಯೋತಿ’ ಮಾಹಿತಿ ಸಂಗ್ರಹಕ್ಕೆ ಸರ್ವರ್ ಡೌನ್ ಸಮಸ್ಯೆ

‘ಗೃಹಜ್ಯೋತಿ’ ಮಾಹಿತಿ ಸಂಗ್ರಹಕ್ಕೆ ಸರ್ವರ್ ಡೌನ್ ಸಮಸ್ಯೆ

ಶಿವಮೊಗ್ಗ, ಜು.೯-ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ಸಂಗ್ರಹಣೆ ಕಾರ್ಯವು, ಶಿವಮೊಗ್ಗ ಜಿಲ್ಲೆಯಾದ್ಯಂತ ಬಿರುಸಿನಿಂದ ನಡೆಯಲಾರಂಭಿಸಿದೆ.

ಆದರೆ ‘ಸರ್ವರ್ ಡೌನ್’ ಸಮಸ್ಯೆಯು ಮಾಹಿತಿ ಸಂಗ್ರಹಣೆ ಕಾರ್ಯಕ್ಕೆ ಎಡರುತೊಡರಾಗಿ ಪರಿಣಮಿಸಿರುವ ದೂರುಗಳು ಮೆಸ್ಕಾಂ ಸಿಬ್ಬಂದಿಗಳ ವಲಯದಿಂದ ಕೇಳಿಬರಲಾರಂಭಿಸಿದೆ.
ಮಾಹಿತಿ ಸಂಗ್ರಹಣೆಗಾಗಿ ಹೊಸ ಮೊಬೈಲ್ ಪೋನ್ ಆಪ್ ವೊಂದನ್ನು ಸರ್ಕಾರ ಪರಿಚಯಿಸಿದೆ. ಸದರಿ ಆಪ್ ನಲ್ಲಿ ಮನೆ ಮನೆಗೆ ತೆರಳಿ ದಾಖಲಾತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುಮಾರು ೫ ಹಂತಗಳಲ್ಲಿ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ.

ಆಪ್‌ನಲ್ಲಿ ಆಧಾರ್, ವೋಟರ್ ಐಡಿ, ರೇಷನ್ ಕಾರ್ಡ್ ಮಾಹಿತಿ ಪಡೆಯುವುದರ ಜೊತೆಗೆ ಫಲಾನುಭವಿಯ ಫೋಟೊ ತೆಗೆದುಕೊಳ್ಳುವ ಪ್ರಕ್ರಿಯೆಗಳು ಸೇರ್ಪಡೆಯಾಗಿವೆ. ನಂತರ ಅರ್ಜಿಯಲ್ಲಿ ಕೈಬರಹದ ಮೂಲಕ ಸದರಿ ಮಾಹಿತಿ ಭರ್ತಿಗೊಳಿಸಿ ಫಲಾನುಭವಿಯ ಸಹಿ ಪಡೆಯಲಾಗುತ್ತದೆ.

ಆದರೆ ಮೊಬೈಲ್ ಫೋನ್ ಆಪ್‌ನಲ್ಲಿ ಮಾಹಿತಿ ಸಂಗ್ರಹಣೆ ವೇಳೆ ಸರ್ವರ್ ಡೌನ್ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಮಾಹಿತಿ ಸಂಗ್ರಹಣೆ ಕಾರ್ಯದಲ್ಲಿ ತೊಡಗಿರುವ ಮೆಸ್ಕಾಂ ಲೈನ್’ಮ್ಯಾನ್ ಗಳು ತೀವ್ರ ತೊಂದರೆ ಎದುರಿಸುವಂತಾಗಿದೆ. ಹಾಗೆಯೇ ನಾಗರಿಕರು ಕೂಡ ಕಿರಿಕಿರಿ ಅನುಭವಿಸುವಂತಾಗಿರುವ ದೂರುಗಳು ಕೇಳಿಬರುತ್ತಿವೆ.

‘ಸರ್ವರ್ ಡೌನ್’ ಸಮಸ್ಯೆಯಿಂದ ಆಪ್‌ನಲ್ಲಿ ಮಾಹಿತಿ ಸಂಗ್ರಹ ವೇಳೆ ಏಕಾಏಕಿ ಲಾಗ್ ಔಟ್ ಆಗುತ್ತಿದೆ. ಮತ್ತೆ ಸಿಬ್ಬಂದಿ ಒಟಿಪಿ ಸಂಖ್ಯೆ ನಮೂದಿಸಿ ಲಾಗ್ ಇನ್ ಆಗಿ, ಮಾಹಿತಿ ಅಪ್ಲೋಡ್ ಮಾಡಬೇಕಾಗುತ್ತದೆ.

ಈ ಕಾರಣದಿಂದ ಆಪ್‌ನಲ್ಲಿ ಮಾಹಿತಿ ಸಂಗ್ರಹಣೆ ಕಾರ್ಯವು ಸಾಕಷ್ಟು ವಿಳಂಬವಾಗುತ್ತಿದೆ. ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಈ ಕಾರಣದಿಂದ ಕೆಲ ಸಿಬ್ಬಂದಿಗಳು ಮುಂಜಾನೆ ಹಾಗೂ ರಾತ್ರಿ ವೇಳೆಯೂ ಮಾಹಿತಿ ಸಂಗ್ರಹಣೆ ಮಾಡುವಂತಾಗಿದೆ. ಈ ವೇಳೆ ಆಪ್‌ನಲ್ಲಿ ಸರ್ವರ್ ಡೌನ್ ಸಮಸ್ಯೆಯಿರುವುದಿಲ್ಲ ಎಂದು ಕೆಲ ಸಿಬ್ಬಂದಿಗಳು ಹೇಳುತ್ತಾರೆ.

ಆಪ್ ನ ಕಾರ್ಯಕ್ಷಮತೆ ಹಾಗೂ ಸರ್ವರ್ ಸಾರ್ಮಥ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಸಿಬ್ಬಂದಿಗಳು ಹಾಗೂ ಸಾರ್ವಜನಿಕ ವಲಯದ್ದಾಗಿದೆ.

ಒತ್ತಡ : ಮೆಸ್ಕಾಂ ಲೈನ್’ಮ್ಯಾನ್ ಗಳು ಮಾಹಿತಿ ಸಂಗ್ರಹಣೆ ಕಾರ್ಯ ನಡೆಸುತ್ತಿದ್ದಾರೆ. ದೈನಂದಿನ ಕೆಲಸಕಾರ್ಯಗಳ ಜೊತೆಗೆ ಸದರಿ ಮಾಹಿತಿ ಸಂಗ್ರಹಣೆ ಕಾರ್ಯ ಕೂಡ ಮಾಡಬೇಕಾಗಿರುವುದರಿಂದ, ಸಿಬ್ಬಂದಿಗಳ ಮೇಲೆ ಕಾರ್ಯಭಾರ ಒತ್ತಡ ಹೆಚ್ಚಾಗುವಂತಾಗಿರುವ ದೂರುಗಳು ಸಿಬ್ಬಂದಿಗಳ ವಲಯದಿಂದ ಕೇಳಿಬರುತ್ತಿವೆ.