Home ಜಿಲ್ಲೆ ಬಡ ಕುಟುಂಬಗಳ ಬದುಕಿಗೆ ಭದ್ರತೆ-ಪ್ರತಿಯೊಂದು ಕುಟುಂಬಕ್ಕೂ ಸೂರು: 2000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಸಚಿವ ಲಕ್ಷ್ಮಣ...

ಬಡ ಕುಟುಂಬಗಳ ಬದುಕಿಗೆ ಭದ್ರತೆ-ಪ್ರತಿಯೊಂದು ಕುಟುಂಬಕ್ಕೂ ಸೂರು: 2000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಸಚಿವ ಲಕ್ಷ್ಮಣ ಸವದಿ

ಅಥಣಿ : ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಬಡ ಕುಟುಂಬಗಳಿಗೆ ಮತ್ತು ನಿರ್ಗತಿಕರಿಗೆ, ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ನಮ್ಮ ಮನೆ ನಮ್ಮ ಹಕ್ಕು ಎಂಬ ಯೋಜನೆಯ ಅಡಿ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಅವರಿಗೆ ಶಾಶ್ವತ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿದೆ. ಈಗ ತಾಲೂಕಿನಲ್ಲಿ ಕೇವಲ 2 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಇನ್ನೂ 10 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು
ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅವರು ಮಂಗಳವಾರ ಇಲ್ಲಿನ ಕೃಷ್ಣಾ ರೈತ ಭವನದಲ್ಲಿ ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ” ನಮ್ಮ ಮನೆ ನಮ್ಮ ಹಕ್ಕು ” ಯೋಜನೆಯಡಿ ಹಲವು ವರ್ಷಗಳಿಂದ ಸೂಕ್ತ ಭದ್ರತೆ ಇಲ್ಲದ 2000ಕ್ಕೂ ಅಧಿಕ ಅರ್ಹ ಕುಟುಂಬಗಳ ಫಲಾನುಭವಿಗಳಿಗೆ ಮನೆ ಹಕ್ಕು ಪತ್ರಗಳನ್ನು ವಿತರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಂದಾಯ ಇಲಾಖೆಯಿಂದ ನಮ್ಮ ಮನೆ ನಮ್ಮ ಹಕ್ಕು ಯೋಜನೆ ಅಡಿ ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಅವರಿಗೆ ಶಾಶ್ವತ ಭದ್ರತೆ ಒದಗಿಸುವ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಮನೆಗಳ ಹಕ್ಕುಪತ್ರ ವಿತರಣೆ ಕೂಡ 6ನೇ ಗ್ಯಾರಂಟಿ ಯೋಜನೆಯಾಗಿದೆ ಎಂದರು.
ಅಥಣಿ ಪಟ್ಟಣ ಸೇರಿದಂತೆ ಇನ್ನೂ ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಡ ಕುಟುಂಬದ ಫಲಾನುಭವಿಗಳು ಸ್ವಂತ ಸೂರಿಲ್ಲದೆ ಗುಡಿಸಲು ಮತ್ತು ಪತ್ರಾಸ್ ಮನೆಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಂತಹ ಮನೆಗಳನ್ನು ಗುರುತಿಸಿ ಬರುವ ಮೂರು ತಿಂಗಳಲ್ಲಿ ಇನ್ನೂ 3 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು.

ಮಾಜಿ ಸೈನಿಕರಿಗೆ ನಿವೇಶನ :
ಅಥಣಿ ಪಟ್ಟಣದ ಹೊರವಲಯದಲ್ಲಿ ಸರ್ಕಾರದ 10 ಎಕರೆ ಪ್ರದೇಶದಲ್ಲಿ ಮಾಜಿ ಸೈನಿಕರಿಗಾಗಿ ನಿವೇಶನಗಳನ್ನು ಹಂಚಿಕೆ ಮಾಡುವ ಸಂಕಲ್ಪ ಹೊಂದಿದ್ದೇನೆ. ಅಥಣಿ ಗ್ರಾಮೀಣದ ಶಿವಯೋಗಿ ನಗರದ ಫಲಾನುಭವಿಗಳಿಗೆ ಮತ್ತು ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹಕ್ಕು ಪತ್ರ ವಿತರಣೆ ಆಗದ ಗ್ರಾಮ ಪಂಚಾಯಿತಿಗಳಲ್ಲಿ ಮತ್ತೊಮ್ಮೆ ಸರ್ವೆ ಕಾರ್ಯ ನಡೆಸಿ ಬರುವ 2 ತಿಂಗಳಲ್ಲಿ ಹಕ್ಕು ಪತ್ರಗಳನ್ನ ವಿತರಿಸಲಾಗುವುದು. ಅಥಣಿ ನಗರದ ಅನೇಕ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನಗಳು ಇರುವುದಿಲ್ಲ, ಅಲೆಮಾರಿ ಜನಾಂಗದವರಿಗೆ ಈಗಾಗಲೇ 2 ಎಕರೆ ಪ್ರದೇಶದಲ್ಲಿ ಹಕ್ಕುಪತ್ರ ನೀಡಲಾಗಿದೆ ಎಂದರು.

ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ : ಹಿಂದಿನ ತಹಸಿಲ್ದಾರ ಸಿದರಾಯ ಬೋಸಗಿ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಅಧಿಕಾರಿಗಳು, ತಾಲೂಕ ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಳೆದ ಆರು ತಿಂಗಳಿಂದ ಸರ್ವೇ ನಡೆಸಿ 2 ಸಾವಿರಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದಾರೆ. ಅಧಿಕಾರಿಗಳು ಮಾಡುವ ಒಳ್ಳೆಯ ಕಾರ್ಯದಿಂದ ಜನಪ್ರತಿನಿಧಿಗಳಿಗೂ ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಅಧಿಕಾರ, ಅಂತಸ್ತು ಮತ್ತು ಆಯುಷ್ಯ ಶಾಶ್ವತ ಅಲ್ಲ, ಸೇವೆ ಮಾಡುವ ಅವಕಾಶ ದೊರೆತಾಗ ನಾವು ಪ್ರಾಮಾಣಿಕತೆಗಿಂತ ಬಡವರ, ನಿರ್ಗತಿಕರ ಸೇವೆಯನ್ನ ಮಾಡಿ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಬೀಳಗಿಯ ವಿಭಾಗೀಯ ಅಧಿಕಾರಿ ಸಿದರಾಯ ಬೋಸಗಿ ಪ್ರಸ್ತಾವಿಕವಾಗಿ ಮಾತನಾಡಿ ದಾಖಲೆಗಳಿಲ್ಲದ ಅನೇಕ ಮನೆಯ ಫಲಾನುಭವಿಗಳಿಗೆ ಅಗತ್ಯ ದಾಖಲಾತಿಗಳನ್ನು ಒದಗಿಸುವ ವಿನೂತನ ಕಾರ್ಯಕ್ರಮವಾಗಿದೆ. ಫಲಾನುಭವಿಗಳಿಗೆ ಹಕ್ಕು ಪತ್ರ, ಮನೆಯ ಪಹಣಿ ಪತ್ರ ಮತ್ತು ಇ -ಸ್ವತ್ತು ದಾಖಲೆಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಈ ಫಲಾನುಭವಿಗಳ ಆಯ್ಕೆ ಮತ್ತು ತಂತ್ರಾಂಶದಲ್ಲಿ ಅವರ ಹೆಸರು ನೋಂದಣಿಗಾಗಿ ನಮ್ಮ ಸಿಬ್ಬಂದಿ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಸಿಬ್ಬಂದಿಗಳ ಶ್ರಮದ ಫಲವಾಗಿ ಇಂದು 2,000ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಯಾಗುತ್ತಿರುವುದು ನಮಗೂ ಸಂತೋಷ ತಂದಿದೆ. ಮುಂಬರುವ ದಿನಗಳಲ್ಲಿ 10 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಸಂಕಲ್ಪವನ್ನು ಸಚಿವರು ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತಾಲೂಕಾ ಆಡಳಿತದಿಂದ ಜನಪರ ಯೋಜನೆಗಳನ್ನ ಅನುಷ್ಠಾನಗೊಳ್ಳಲಿ, ನನಗೆ ಈ ಪುಣ್ಯಕ್ಷೇತ್ರದಲ್ಲಿ ಎರಡು ವರ್ಷ ಸೇವೆ ಸಲ್ಲಿಸಲು ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ಇಲ್ಲಿನ ಜನರ ಪ್ರೀತಿ ಮತ್ತು ಎಲ್ಲಾ ಅಧಿಕಾರಿಗಳ ಸಮನ್ವಯತೆ, ಸಹಕಾರ ನನ್ನ ಹೃದಯದಲ್ಲಿ ಶಾಶ್ವತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ತಾಲೂಕಾ ಆಡಳಿತದ ವತಿಯಿಂದ ಸಚಿವ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಥಣಿ ತಹಸೀಲ್ದಾರರಾಗಿ ಎರಡು ವರ್ಷ ಜನಪರ ಸೇವೆ ಸಲ್ಲಿಸಿ ವಿಭಾಗೀಯ ಅಧಿಕಾರಿಯಾಗಿ ಪದೋನ್ನತಿ ಹೊಂದಿದ ಸಿದರಾಯ ಬೋಸಗಿ ಅವರನ್ನು ಸಚಿವರು ಸನ್ಮಾನಿಸಿದರು. ಈ ವೇಳೆ ಅಥಣಿ ಮತ್ತು ಕಾಗವಾಡ ತಹಸಿಲ್ದಾರ್ ರವೀಂದ್ರ ಹಾದಿಮನಿ, ಗ್ರೇಡ್ 2 ತಹಶೀಲ್ದಾರ ಮಹಾದೇವ ಬಿರಾದಾರ. ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಸಿಪಿಐ ಸಂತೋಷ ಹಳ್ಳೂರ. ಜಿ ಎಸ್ ರೋಡಗಿ. ಕಂದಾಯ ನಿರೀಕ್ಷಕರಾದ ಸಂತೋಷ ಬಾಯನಾಯಕ. ವಿಷ್ಣು ಪೂಜಾರಿ. ಗ್ರಾಮ ಆಡಳಿತ ಅಧಿಕಾರಿಗಳಾದ ಎಂ ಎಂ ಮಿರ್ಜಿ. ಕಲ್ಮೇಶ ಕನಮಡಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.