
ಯಾದಗಿರಿ :ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ (ಪಿಎಂಜೆವಿಕೆ) ಅಡಿಯಲ್ಲಿ ಜಾರಿಯಾಗುತ್ತಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗೆ ಫಲಿತಾಂಶ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರವನ್ನು ಉಲ್ಲೇಖಿಸಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಲ್ಪಸಂಖ್ಯಾತರು ಹೆಚ್ಚಿರುವ ಜಿಲ್ಲೆಗಳ ಮೂಲಸೌಕರ್ಯ ಕೊರತೆ, ಸಾಮಾಜಿಕ-ಆರ್ಥಿಕ ಸೂಚ್ಯಂಕಗಳು ಹಾಗೂ ಮುಂದಿನ ಅಭಿವೃದ್ಧಿ ಅಗತ್ಯಗಳ ಕುರಿತು ಕೇಂದ್ರ ಸರ್ಕಾರ ಯಾವುದೇ ಸಮಗ್ರ ಮಾಹಿತಿ ಸಂಗ್ರಹಿಸುತ್ತಿಲ್ಲ ಎಂಬುದು ಆತಂಕಕಾರಿ ಎಂದು ತಿಳಿಸಿದ್ದಾರೆ.
ಯೋಜನೆಯ ಫಲಾನುಭವಿ ಪ್ರದೇಶಗಳನ್ನು ಯಾವ ಮಾನದಂಡದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಹಾಗೂ ಸ್ಥಳೀಯ ಅಗತ್ಯಗಳನ್ನು ಹೇಗೆ ಗುರುತಿಸಲಾಗಿದೆ ಎಂಬುದರ ಕುರಿತು ಕೇಂದ್ರ ಮಟ್ಟದಲ್ಲಿ ಯಾವುದೇ ಕೇಂದ್ರೀಕೃತ ಮಾಹಿತಿ ಇಲ್ಲ ಎಂದು ಸಚಿವಾಲಯವೇ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.
೨೦೨೧-೨೨ರಿಂದ ೨೦೨೫-೨೬ರವರೆಗೆ ಕರ್ನಾಟಕದಲ್ಲಿ ಪಿಎಂಜೆವಿಕೆ ಯೋಜನೆಯಡಿ ೬೯೯ ಯೋಜನೆಗಳು ಅಥವಾ ಫಲಾನುಭವಿಗಳನ್ನು ದಾಖಲಿಸಲಾಗಿದ್ದು, ?೭ ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ. ಆದರೆ ಯೋಜನೆಯ ಪರಿಣಾಮವನ್ನು ಅಳೆಯಲು ಅಗತ್ಯವಾದ ಮೌಲ್ಯಮಾಪನ ವ್ಯವಸ್ಥೆಯ ಕೊರತೆಯಿಂದ ಸಾರ್ವಜನಿಕ ಹಣದ ಸದ್ಬಳಕೆ ಹಾಗೂ ಯೋಜನೆಯ ಯಶಸ್ಸು ಎಷ್ಟರ ಮಟ್ಟಿಗೆ ಸಾಧನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಸಂಸದರು, ೨೦೧೧ರ ಜನಗಣತಿಯ ಪ್ರಕಾರ ಜಿಲ್ಲೆಯ ಪರಿಶಿಷ್ಟ ಜಾತಿಯ ಮಹಿಳೆಯರ ಸಾಕ್ಷರತಾ ಪ್ರಮಾಣ ಕೇವಲ ಶೇ.೩೭.೦೩ ಇದ್ದು, ಇದು ರಾಷ್ಟ್ರೀಯ ಸರಾಸರಿ ಶೇ.೫೬.೪೬ಕ್ಕಿಂತ ಬಹಳ ಕಡಿಮೆ ಎಂದು ಹೇಳಿದರು. ಇಂತಹ ಅಸಮಾನತೆಗಳನ್ನು ನಿವಾರಿಸಲು ಜಿಲ್ಲಾ ಮಟ್ಟದ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಗುರಿ ಹೊಂದಿದ ಯೋಜನೆಗಳನ್ನು ರೂಪಿಸುವುದು ಅಗತ್ಯ ಎಂದು ಒತ್ತಿಹೇಳಿದರು.
ಜಿಲ್ಲಾವಾರು ಮಾಹಿತಿ ಲಭ್ಯವಿಲ್ಲದಿದ್ದರೆ ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ರೂಪಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕ ಹಣದ ವೆಚ್ಚದ ಜೊತೆಗೆ ಅದರ ಫಲಿತಾಂಶಗಳ ಪಾರದರ್ಶಕ ಮೌಲ್ಯಮಾಪನವೂ ನಡೆಯಬೇಕು ಎಂದು ಅವರು ಹೇಳಿದರು.
ಈಗಾಗಲೇ ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ) ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಸೇರಿದಂತೆ ಹಲವು ಕೇಂದ್ರ ಯೋಜನೆಗಳಲ್ಲಿ ಜಿಲ್ಲಾವಾರು ಫಲಿತಾಂಶ ಆಧಾರಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದೇ ಮಾದರಿಯನ್ನು ಪಿಎಂಜೆವಿಕೆ ಯೋಜನೆಯಲ್ಲೂ ಅಳವಡಿಸಬೇಕು ಎಂದು ಅವರು ಆಗ್ರಹಿಸಿದರು.
ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಯೋಜನೆಯ ಫಲಿತಾಂಶಗಳನ್ನು ನಿಯಮಿತವಾಗಿ ಪರಿಶೀಲಿಸಿ, ಮೂಲಭೂತ ಸೌಲಭ್ಯಗಳಿಂದ ವಂಚಿತ ಪ್ರದೇಶಗಳಿಗೆ ಮುಂದಿನ ಹಂತದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಸಂಸದ ಜಿ. ಕುಮಾರ ನಾಯಕ ಒತ್ತಾಯಿಸಿದ್ದಾರೆ.


































