Home ಕ್ರೈಂ ಸುದ್ದಿಗಳು 12 ವರ್ಷಗಳ ಬಳಿಕ ಕನ್ಯಾಕೋಳೂರು ದಳಪತಿ ಹತ್ಯೆ ಪ್ರಕರಣಕ್ಕೆ ಅಂತ್ಯ: 17 ಮಂದಿಗೆ ಜೀವಾವಧಿ ಶಿಕ್ಷೆ,...

12 ವರ್ಷಗಳ ಬಳಿಕ ಕನ್ಯಾಕೋಳೂರು ದಳಪತಿ ಹತ್ಯೆ ಪ್ರಕರಣಕ್ಕೆ ಅಂತ್ಯ: 17 ಮಂದಿಗೆ ಜೀವಾವಧಿ ಶಿಕ್ಷೆ, 4.25 ಲಕ್ಷ ದಂಡ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ 2014ರಲ್ಲಿ ನಡೆದಿದ್ದ ದಲಿತ ಮುಖಂಡ ದೇವೇಂದ್ರಪ್ಪ ಭೀಮಪ್ಪ ದಳಪತಿ ಹತ್ಯೆ ಪ್ರಕರಣಕ್ಕೆ ಬರೋಬ್ಬರಿ 12 ವರ್ಷಗಳ ಬಳಿಕ ಮಹತ್ವದ ತೀರ್ಪು ಹೊರಬಿದ್ದಿದೆ. ಯಾದಗಿರಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ 17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮತ್ತೊಬ್ಬ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಇಬ್ಬರು ಆರೋಪಿಗಳಿಗೆ ತಲಾ 6 ತಿಂಗಳ ಸಜೆ ವಿಧಿಸಿದೆ. ಜೊತೆಗೆ ಎಲ್ಲ ಆರೋಪಿಗಳಿಗೆ ಸೇರಿ ಒಟ್ಟು ?4.25 ಲಕ್ಷ ದಂಡ ವಿಧಿಸಲಾಗಿದೆ.

ಪ್ರಧಾನ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶ ಮರುಳಾಸಿದ್ದಾರಾದ್ಯ ಎಚ್.ಜೆ. ಅವರು ಈ ಐತಿಹಾಸಿಕ ತೀರ್ಪು ಪ್ರಕಟಿಸಿದರು. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಸಮರ್ಥವಾಗಿ ವಾದ ಮಂಡಿಸಿದರು.

2014ರ ಜನವರಿಯಲ್ಲಿ ಕನ್ಯಾಕೋಳೂರಿನಲ್ಲಿ ನಡೆದ ಶ್ರೀ ಚೌಡೇಶ್ವರಿ ದೇವಿ ಜಾತ್ರೆಯ ವೇಳೆ ಬ್ಯಾನರ್ ಹರಿದ ವಿಚಾರ ಜಾತಿ ಸಂಘರ್ಷಕ್ಕೆ ಕಾರಣವಾಗಿತ್ತು. ಈ ವೈಷಮ್ಯ ಹಿಂಸಾತ್ಮಕ ಸ್ವರೂಪ ಪಡೆದು, ದೇವೇಂದ್ರಪ್ಪ ದಳಪತಿ ಅವರ ಮೇಲೆ ಕೊಡಲಿ, ಬಡಿಗೆ ಹಾಗೂ ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಶಹಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಒಟ್ಟು 32 ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ 68 ಸಾಕ್ಷಿದಾರರ ಪೈಕಿ 37 ಮಂದಿಯ ಸಾಕ್ಷ್ಯವನ್ನು ನ್ಯಾಯಾಲಯ ದಾಖಲಿಸಿಕೊಂಡು, ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿತು.

ಅಂತಿಮವಾಗಿ ನ್ಯಾಯಾಲಯ ಆರೋಪಿ ಸಂಖ್ಯೆ 1ರಿಂದ 17ರವರೆಗೆ ಜೀವಾವಧಿ ಶಿಕ್ಷೆ, ಆರೋಪಿ ಸಂಖ್ಯೆ 18ಕ್ಕೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಆರೋಪಿ ಸಂಖ್ಯೆ 19 ಮತ್ತು 20ಕ್ಕೆ ತಲಾ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯ ವಿಧಿಸಿರುವ ?4.25 ಲಕ್ಷ ದಂಡದ ಮೊತ್ತವನ್ನು ಮೃತ ದೇವೇಂದ್ರಪ್ಪ ದಳಪತಿ ಅವರ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ. ಅಲ್ಲದೆ, ಹೆಚ್ಚಿನ ಪರಿಹಾರ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಕುಟುಂಬಕ್ಕೆ ಸೂಚನೆ ನೀಡಿದೆ.

ಈ ತೀರ್ಪು ಯಾದಗಿರಿ ಜಿಲ್ಲೆಯ ಬಹುಚರ್ಚಿತ ಹತ್ಯೆ ಪ್ರಕರಣವೊಂದಕ್ಕೆ ನ್ಯಾಯಾಂಗದ ಮಹತ್ವದ ಅಂತ್ಯವೆಂದು ಪರಿಗಣಿಸಲಾಗುತ್ತಿದೆ.