
ಯಾದಗಿರಿ:ಜು.೨೬: ನಗರದ ಅಕ್ಷರ ಅಕಾಡೆಮಿಯಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಆತ್ಮೀಯ ಸ್ವಾಗತ ಸಮಾರಂಭವನ್ನು ವಿಜೃಂಭಣೆಯಿAದ ಆಯೋಜಿಸಲಾಯಿತು. ಶೈಕ್ಷಣಿಕ ವಾತಾವರಣ ನಿರ್ಮಿಸಿ, ಹೊಸ ವಿದ್ಯಾರ್ಥಿಗಳಲ್ಲಿ ಅಧ್ಯಯನದ ಆಸಕ್ತಿ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚನ್ನರಡ್ಡಿ ಪಾಟೀಲ್ ತುನ್ನೂರು, ವಿದ್ಯಾರ್ಥಿ ಜೀವನದಲ್ಲಿ ಪದವಿಪೂರ್ವ ಶಿಕ್ಷಣದ ಹಂತ ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂದು ತಿಳಿಸಿದರು. ಶಿಸ್ತು, ಪರಿಶ್ರಮ ಹಾಗೂ ಏಕಾಗ್ರತೆಯೊಂದಿಗೆ ಅಧ್ಯಯನ ಮಾಡಿದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಕ್ಷರ ಅಕಾಡೆಮಿಯ ಅಧ್ಯಕ್ಷ ಡಾ. ಬಸವರಾಜ ಇಜೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಸಾಧನೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗೆ ?೨೫,೦೦೦ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರೌಢಶಾಲಾ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕೆಂಭಾವಿ, ಉಪನ್ಯಾಸಕರು ಬೋಧಿಸುವ ಪ್ರತಿಯೊಂದು ವಿಷಯವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕು. ಸಮಯವನ್ನು ವ್ಯರ್ಥ ಮಾಡದೆ ನಿರಂತರ ಅಧ್ಯಯನ ಮತ್ತು ಏಕಾಗ್ರತೆಯಿಂದ ಗುರಿ ಸಾಧಿಸುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಚನ್ನಬಸಪ್ಪ ಮಾತನಾಡಿ, ಪ್ರತಿಭೆ ಯಾವುದೇ ಪರಿಸ್ಥಿತಿಯಲ್ಲೂ ಅರಳಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ, ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ಖಚಿತ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶ್ರೀಮಠ ಹೆಡಗಿಮದ್ರ, ವಿದ್ಯಾರ್ಥಿಗಳು ಅಧ್ಯಯನಶೀಲತೆ, ಸಮಯಪಾಲನೆ ಹಾಗೂ ಗುರು-ಹಿರಿಯರ ಗೌರವವನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕು. ಪ್ರತಿನಿತ್ಯ ತರಗತಿಗಳಿಗೆ ಹಾಜರಾಗಿ ಶ್ರದ್ಧೆಯಿಂದ ಕಲಿತರೆ ಜೀವನದ ಕನಸುಗಳು ನನಸಾಗುತ್ತವೆ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಸವರಾಜ್ ಆಲೂರ್, ಉಪನ್ಯಾಸಕರಾದ ಪ್ರೇಮ್, ಗುತ್ತಣ್ಣಗೌಡ, ಬಸವರಾಜ್ ಕೆರೋಟಿಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ರಕ್ಷಿತಾ ನಿರೂಪಿಸಿದರು. ಕುಮಾರಿ ವೈಷ್ಣವಿ ಸ್ವಾಗತಿಸಿದರು. ಕುಮಾರಿ ಶ್ರೀನಿಧಿ ವಂದನಾರ್ಪಣೆ ಸಲ್ಲಿಸಿದರು.































