Home ಮುಖಪುಟ ಸುದ್ದಿ ಪ್ರದೋಷ್ ಮಾಫಿ ಸಾಕ್ಷಿ: ಹೇಳಿಕೆ ನ್ಯಾಯಾಲಯದಲ್ಲಿ ದಾಖಲು

ಪ್ರದೋಷ್ ಮಾಫಿ ಸಾಕ್ಷಿ: ಹೇಳಿಕೆ ನ್ಯಾಯಾಲಯದಲ್ಲಿ ದಾಖಲು

ರೇಣುಕಾಸ್ವಾಮಿ ಹತ್ಯೆ ಪ್ರಕರಣ

ಬೆಂಗಳೂರು.ಸೆ.೨೮ – ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಇಂದು ವಿಚಾರಣೆ ಮುಂದುವರಿದಿದ್ದು,ಆರೋಪಿ ಪ್ರದೋಷ್ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್‌ನಲ್ಲಿ ದಾಖಲಿಸುವ ಪ್ರಕ್ರಿಯೆ ನಡೆಯಿತು.

ಭದ್ರತೆಯೊಂದಿಗೆ ಕೋರ್ಟ್‌ಗೆ ಹಾಜರಾದ ಪ್ರದೋಷ್, ಪ್ರಕರಣಕ್ಕೆ ಸಂಬಂಧಿಸಿದ ಹಲವು ಘಟನೆಗಳ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ದರ್ಶನ್ ಪರ ವಕೀಲರು ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು.
ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ)ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಪರ ವಕೀಲರೂ ತ್ವರಿತ ವಿಚಾರಣೆಗೆ ಸಹಕರಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ನಂತರ ಕೆಲಕಾಲ ಅರ್ಜಿ ವಿಚಾರಣೆ ನಡೆದ ಬಳಿಕ, ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದವರು ಕೋರ್ಟ್‌ನಿಂದ ಹೊರಹೋಗುವಂತೆ ನ್ಯಾಯಾಧೀಶರು ಸೂಚಿಸಿದರು. ಬಳಿಕ ಬಾಗಿಲು ಮುಚ್ಚಿ ವಿಚಾರಣೆ ಮುಂದುವರಿಸಲಾಯಿತು.

ದರ್ಶನ್ ಪರಿಚಯದ ಬಗ್ಗೆ ಹೇಳಿಕೆ:
೨೦೦೩ರಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದ ಸಂದರ್ಭದಲ್ಲಿ ದರ್ಶನ್ ಅವರ ಪರಿಚಯವಾಯಿತು.ಕಾಲಕ್ರಮೇಣ ಇಬ್ಬರೂ ಆತ್ಮೀಯ ಸ್ನೇಹಿತರಾದರು ಎಂದು ಪ್ರದೋಷ್ ಹೇಳಿಕೆ ನೀಡಿದ್ದಾರೆ.

ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಈ ವೇಳೆ ದರ್ಶನ್ ಅವರನ್ನು ಭೇಟಿಯಾಗುತ್ತಿದ್ದೆ. ಕಾರ್ಯಕ್ರಮಗಳಿದ್ದಾಗ ಅವರ ಮನೆಗೂ ಹೋಗುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.

೨೦೨೪ರ ಜೂನ್ ೮ರಂದು ಶನಿವಾರ ರಜೆ ಇದ್ದ ಕಾರಣ ಗಿರಿನಗರದ ಮನೆಯಿಂದ ಬೈಕ್‌ನಲ್ಲಿ ದರ್ಶನ್ ಅವರ ಐಡಿಯಲ್ ಹೋಮ್ಸ್‌ನ ಮನೆಗೆ ತೆರಳಿದ್ದೆ. ಆಗ ದರ್ಶನ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಅವರ ತರಬೇತುದಾರ ಹೇಮಂತ್ ಕೂಡ ಅಲ್ಲಿದ್ದರು ಎಂದು ಪ್ರದೋಷ್ ಹೇಳಿದ್ದಾರೆ.

ದರ್ಶನ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಬಳಿಕ ಅವರ ಶೂಟಿಂಗ್ ಬಗ್ಗೆ ಸುಮಾರು ೧೫ ನಿಮಿಷ ಮಾತನಾಡಿದ್ದೆ.ಮಗಳನ್ನು ಸ್ವಿಮ್ಮಿಂಗ್‌ಗೆ ಕರೆದುಕೊಂಡು ಹೋಗಬೇಕಿರುವುದರಿಂದ ಮನೆಗೆ ತೆರಳುವುದಾಗಿ ತಿಳಿಸಿದ್ದೆ. ಆದರೆ, ಮಧ್ಯಾಹ್ನ ವಿನಯ್ ಅವರ ಸ್ಟೋನಿ ಬ್ರೂಕ್‌ನಲ್ಲಿ ಸಣ್ಣ ಪಾರ್ಟಿ ಇದೆ, ಬರುವಂತೆ ದರ್ಶನ್ ಒತ್ತಾಯಿಸಿದರು ಎಂದು ಹೇಳಿದ್ದಾರೆ.

ಸ್ಟೋನಿ ಬ್ರೂಕ್‌ಗೆ ತೆರಳಿದ ತಂಡ :
ನಾನು ಸುಸ್ತಾಗಿದ್ದೇನೆ, ಬರಲು ಸಾಧ್ಯವಿಲ್ಲ ಎಂದು ಹೇಳಿದರೂ ದರ್ಶನ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪಾರ್ಟಿಗೆ ತೆರಳಲು ಒಪ್ಪಿಕೊಂಡೆ.ನಂತರ ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಅವರ ಮನೆಗೆ ಮಧ್ಯಾಹ್ನ ಸುಮಾರು ೧೨.೩೦ಕ್ಕೆ ಬಂದೆ ಎಂದು ಪ್ರದೋಷ್ ಹೇಳಿದ್ದಾರೆ.

ನಟ ದರ್ಶನ್ ಮನೆಯಿಂದ ನಾಗರಾಜ್ ಕೂಡ ಕಾರಿನಲ್ಲಿ ಸೇರಿಕೊಂಡರು.ಅಲ್ಲಿಂದ ಆರ್.ಆರ್.ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ,ಕಾರಿನಲ್ಲೇ ದರ್ಶನ ಪಡೆದ ಬಳಿಕ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ತೆರಳಿದ್ದೆವು ಎಂದು ತಿಳಿಸಿದ್ದಾರೆ.

ರೆಸ್ಟೋರೆಂಟ್‌ಗೆ ಸುಮಾರು ೧.೩೦ರ ವೇಳೆಗೆ ತಲುಪಿದ್ದೆವು. ಅಲ್ಲಿ ಯಶಸ್ ಸೂರ್ಯ ಇದ್ದರು. ಮತ್ತೊಂದು ಸ್ಕಾರ್ಪಿಯೋ ಹಾಗೂ ಫೋರ್ಡ್ ಎಂಡೀವರ್ ಕಾರುಗಳು ನಮ್ಮ ಕಾರನ್ನು ಹಿಂಬಾಲಿಸುತ್ತಿದ್ದವು. ಅವುಗಳಲ್ಲಿ ದರ್ಶನ್ ಅವರ ಪರಿಚಿತರು ಹಾಗೂ ಬಾಡಿಗಾರ್ಡ್ ಇದ್ದರು ಎಂದು ಪ್ರದೋಷ್ ಹೇಳಿದ್ದಾರೆ.

ದರ್ಶನ್, ಪವಿತ್ರಾ ನಡುವೆ ವೀಡಿಯೊ ಕರೆ :
ರೆಸ್ಟೋರೆಂಟ್‌ನ ಮೊದಲ ಮಹಡಿಯಲ್ಲಿ ದರ್ಶನ್‌ಗಾಗಿ ವಿಶೇಷವಾಗಿ ಮಾಡಲಾಗಿದ್ದ ಡಿ ಬಾಸ್ ಸಫಾರಿ ಎಂಬ ಸ್ಥಳದಲ್ಲಿ ಎಲ್ಲರೂ ಸೇರಿದ್ದರು.ದರ್ಶನ್, ಯಶಸ್ ಸೂರ್ಯ, ನಾಗರಾಜ್, ವಿನಯ್ ಹಾಗೂ ನಂತರ ಚಿಕ್ಕಣ್ಣ ಕೂಡ ಬಂದಿದ್ದರು. ತಾನು ಮದ್ಯಪಾನ ಮಾಡುವುದಿಲ್ಲದ ಕಾರಣ ಜ್ಯೂಸ್ ತೆಗೆದುಕೊಂಡಿದ್ದೆ ಎಂದು ಪ್ರದೋಷ್ ಹೇಳಿದ್ದಾರೆ.

ಸುಮಾರು ಮಧ್ಯಾಹ್ನ ೨.೩೦ರ ವೇಳೆಗೆ ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಅಲ್ಲಿಗೆ ಬಂದರು.ದರ್ಶನ್ ಮತ್ತು ವಿನಯ್ ಬಳಿ ತೆರಳಿ ಮೊಬೈಲ್‌ನಲ್ಲಿದ್ದ ಫೋಟೊವೊಂದನ್ನು ತೋರಿಸಿದರು.ಬಳಿಕ ಪವನ್, ಪವಿತ್ರಾ ಗೌಡ ಅವರಿಗೆ ವಾಟ್ಸ್‌ಪ್ ವೀಡಿಯೊ ಕಾಲ್ ಮಾಡಿದರು ಎಂದು ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವೀಡಿಯೊ ಕರೆಯಲ್ಲಿ ದರ್ಶನ್ ಪವಿತ್ರಾ ಗೌಡ ಜೊತೆ ಮಾತನಾಡಿದರು.ನೀನು ಅಳಬೇಡ, ನಾನಿದ್ದೀನಿ ಎಂದು ಹೇಳಿದ್ದಲ್ಲದೆ, ರೆಸ್ಟೋರೆಂಟ್‌ನಿಂದ ಊಟ ಕಳುಹಿಸುವುದಾಗಿ ತಿಳಿಸಿದರು ಎಂದು ಪ್ರದೋಷ್ ಹೇಳಿದ್ದಾರೆ.

ಪವಿತ್ರಾ ಮನೆಗೆ ತೆರಳಿದ ದರ್ಶನ್:
ಊಟ ಮುಗಿಸಿದ ಬಳಿಕ ಎಲ್ಲರೂ ಹೊರಡಲು ಸಿದ್ಧರಾದಾಗ, ದರ್ಶನ್,ತಮಗೂ ವಿನಯ್‌ಗೂ ಸ್ವಲ್ಪ ಕೆಲಸವಿದೆ ಎಂದು ಹೇಳಿದ್ದರು. ಬಳಿಕ ಪ್ರದೋಷ್ ಅವರ ಕಾರಿನಲ್ಲಿ ತೆರಳಲು ದರ್ಶನ್ ಸೂಚಿಸಿದರು.

ವಿಷ್ಣುವರ್ಧನ್ ಸಮಾಧಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಬಾಡಿಗಾರ್ಡ್‌ನ್ನು ಅವರ ಮನೆಗೆ ತೆರಳುವಂತೆ ದರ್ಶನ್ ಸೂಚಿಸಿದರು. ನಂತರ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ ಪವಿತ್ರಾ ಗೌಡ ಮನೆಗೆ ತೆರಳಬೇಕು ಎಂದು ದರ್ಶನ್ ತಿಳಿಸಿದರು ಎಂದು ಪ್ರದೋಷ್ ಹೇಳಿದ್ದಾರೆ.

ಮಧ್ಯಾಹ್ನ ಸುಮಾರು ೩ರಿಂದ ೪ ಗಂಟೆಯ ವೇಳೆಗೆ ಪವಿತ್ರಾ ಗೌಡ ಮನೆಗೆ ತೆರಳಿದ್ದೆವು. ಪವಿತ್ರಾ ಗೌಡ ಕಾರಿನ ಬಳಿಗೆ ಬಂದ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ಹಿಂದಿನ ಸೀಟ್‌ನಲ್ಲಿ ಕುಳಿತುಕೊಂಡರು ಎಂದು ಪ್ರದೋಷ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

ದರ್ಶನ್ ಅರ್ಜಿ ವಜಾ


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ.


ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಸೆ.೨೮ರಂದು ನ್ಯಾಯಾಲಯ ದಿನಾಂಕ ನಿಗದಿಪಡಿಸಿತ್ತು. ಇದನ್ನು ತಡೆಯುವಂತೆ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.


ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕನಿಷ್ಠ ೧೦ ದಿನಗಳ ಕಾಲಾವಕಾಶ ಅಗತ್ಯವಿದೆ. ಹೀಗಾಗಿ, ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮಾತ್ರ ಮುಂದೂಡಬೇಕು. ಉಳಿದ ಸಾಕ್ಷಿಗಳ ಹೇಳಿಕೆ ದಾಖಲಿಸಬಹುದು ಎಂದು ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದ್ದರು.


ಹೈಕೋರ್ಟ್ ಸೂಚಿಸಿರುವ ಏಳು ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬರಾಗಿದ್ದು, ಅವರನ್ನು ಏಳನೇ ಸಾಕ್ಷಿಯಾಗಿ ಪರಿಗಣಿಸಿ ಹೇಳಿಕೆ ದಾಖಲಿಸಬೇಕು ಎಂದು ವಕೀಲರು ವಾದಿಸಿದ್ದರು. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಮಯ ನೀಡುವಂತೆ ಮನವಿ ಮಾಡಲಾಗಿತ್ತು.


ಇದಕ್ಕೆ ಸರ್ಕಾರಿ ಪರ ವಕೀಲ ಸಚಿನ್ ಆಕ್ಷೇಪ ವ್ಯಕ್ತಪಡಿಸಿದರು. ಸೆ.೨೪ರಂದೇ ಪ್ರದೋಷ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆದ ಬಳಿಕವೇ ಸಮನ್ಸ್ ನೀಡಲಾಗಿದೆ. ಅರ್ಜಿಯಲ್ಲಿ ಯಾವುದೇ ಹೊಸ ಮಾಹಿತಿ ಅಥವಾ ಹೊಸ ಅಂಶಗಳಿಲ್ಲ. ಹೀಗಾಗಿ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.


ಎರಡೂ ಕಡೆಯ ವಾದ ಆಲಿಸಿದ ವಿಚಾರಣಾ ನ್ಯಾಯಾಲಯ, ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ಮುಂದೂಡಲು ದರ್ಶನ್ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.