
ಮೈಸೂರು, ಸೆ. ೨೮- ಮುಡಾದ ೫೦:೫೦ ಅನುಪಾತದ ಅಕ್ರಮ ನಿವೇಶನಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಬಿಜೆಪಿ ಶಾಸಕ ಶ್ರೀವತ್ಸ ಅವರು ಮನವಿ ಸಲ್ಲಿಸಿದ್ದಾರೆ. ಅದರಂತೆ ಅಕ್ರಮ ಸೈಟ್‌ಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಪ್ರಕಟಿಸಲಾಗುವುದು ಎಂದರು.
ನ್ಯಾಯಮೂರ್ತಿ ದೇಸಾಯಿ ಆಯೋಗದ ವರದಿಯಂತೆ ಎಲ್ಲಾ ಅಕ್ರಮ ಸೈಟ್‌ಗಳನ್ನು ರದ್ದುಪಡಿಸಲಾಗಿದೆ. ಆಯೋಗ ಕಾನೂನುಬದ್ಧವಾಗಿ ಸೈಟ್ ಪಡೆದವರನ್ನು ಪಟ್ಟಿಯಿಂದ ಹೊರಗಿಟ್ಟು, ಪ್ರತಿ ನಿವೇಶನದ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಿದೆ. ಹೀಗಾಗಿ ಮತ್ತೊಮ್ಮೆ ಪರಿಶೀಲನೆ ನಡೆಸುವ ಅಗತ್ಯವಿಲ್ಲ. ಆಯೋಗ ನೀಡಿರುವ ಅಕ್ರಮ ಪಟ್ಟಿಯನ್ನೇ ನಾವು ಪ್ರಕಟಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಅಕ್ರಮವಾಗಿ ಪಡೆದ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಲ್ಲಿ, ಖರೀದಿದಾರರಿಗೆ ಸಮಸ್ಯೆಯಾಗದಂತೆ ತಪ್ಪಿಸಲು ಸಾಧ್ಯವೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದರು.
ಮಾವುತರು, ಕಾವಾಡಿಗಳ ಉಪಹಾರ ಕೂಟಕ್ಕೆ ತಡವಾಗಿ ಬಂದಿದ್ದಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ನಮ್ಮದು ಹೊಸ ಮನೆ. ಮನೆಯ ವಸ್ತುಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿವೆ. ಮನೆಯಲ್ಲಿ ತಾಯಿ ಇರಲಿಲ್ಲ, ಯಾವುದೇ ಕೆಲಸಗಾರರು ಇರಲಿಲ್ಲ. ಹೀಗಾಗಿ ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡು ಬರುವಲ್ಲಿ ತಡವಾಯಿತು. ಉದ್ದೇಶಪೂರ್ವಕವಾಗಿ ತಡವಾಗಿ ಬಂದಿಲ್ಲ ಎಂದು ಅವರು ಹೇಳಿದರು.
ಈ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.























