Home ಮುಖಪುಟ ಸುದ್ದಿ 40 ಕಿಮೀ ಪೊಲೀಸ್ ಬೆನ್ನಟ್ಟಿ ಬಂಧನ

40 ಕಿಮೀ ಪೊಲೀಸ್ ಬೆನ್ನಟ್ಟಿ ಬಂಧನ

ಕೊಯಮತ್ತೂರು: ತಮಿಳುನಾಡಿನಲ್ಲಿ ಪೊಲೀಸರ ಬೆನ್ನಟ್ಟುವಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ತಂಬಾಕು ಕಳ್ಳಸಾಗಣೆ ಶಂಕಿತರು ಸುಮಾರು 40 ಕಿ.ಮೀ. ದೂರ ಕಾರು ಚಲಾಯಿಸಿದ ವೇಳೆ, ಹೆಡ್ ಕಾನ್‌ಸ್ಟೆಬಲ್ ವೆಲ್ಮುರುಗನ್ ಕಾರಿನ ಮೇಲ್ಛಾವಣಿಗೆ ಹತ್ತಿ ಹಿಡಿದುಕೊಂಡು ಅವರನ್ನು ಬಂಧಿಸಲು ನೆರವಾದ ಘಟನೆ ನಡೆದಿದೆ. ಅವರ ಧೈರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಘಟನೆಯ ವಿಡಿಯೊವನ್ನು ವಾಹನ ಸವಾರರು ದಾಖಲಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕಾರಿನಲ್ಲಿ ಸುಮಾರು 300 ಕೆ.ಜಿ. ಗುಟ್ಕಾ ಹಾಗೂ ಇತರ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಕೊಯಮತ್ತೂರು ಸಮೀಪ ಪೊಲೀಸರು ನಡೆಸುತ್ತಿದ್ದ ವಾಹನಗಳ ತಪಾಸಣೆ ವೇಳೆ ಕಾರನ್ನು ತಡೆದಿದ್ದರು. ಕಾರಿನ ಹಿಂಭಾಗದಲ್ಲಿ ಹಲವು ಚೀಲಗಳು ಕಂಡುಬಂದಿದ್ದು, ಸಬ್‌ಇನ್‌ಸ್ಪೆಕ್ಟರ್ ಅವುಗಳನ್ನು ಪರಿಶೀಲಿಸಲು ಮುಂದಾದಾಗ, ಕಾರಿನಲ್ಲಿದ್ದ ಮೂವರು ಪೊಲೀಸರನ್ನು ತಳ್ಳಿ, ಬಾಗಿಲುಗಳನ್ನು ಲಾಕ್ ಮಾಡಿಕೊಂಡು ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಹೆಡ್ ಕಾನ್‌ಸ್ಟೆಬಲ್ ವೆಲ್ಮುರುಗನ್ ಕಾರಿನ ಮೇಲ್ಛಾವಣಿಗೆ ಹಾರಿ ಹಿಡಿದುಕೊಂಡಿದ್ದಾರೆ.

ಕಾರ್ ಕೊಯಮತ್ತೂರು ಹೊರವಲಯದ ಹಲವು ಜನನಿಬಿಡ ಮಾರ್ಗಗಳಲ್ಲಿ ಸಂಚರಿಸಿ ಟೋಲ್ ಪ್ಲಾಜಾ ತಲುಪಿದೆ. ಚಾಲಕ ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಪಾವತಿಸಿ, ಬ್ಯಾರಿಯರ್ ದಾಟಿ ವೇಗವಾಗಿ ಮುಂದುವರಿದಿದ್ದಾನೆ. ಮೇಲ್ಛಾವಣಿಗೆ ಅಪಾಯಕಾರಿಯಾಗಿ ಅಂಟಿಕೊಂಡಿದ್ದ ವೆಲ್ಮುರುಗನ್ ಅವರನ್ನು ಕಂಡ ವಾಹನ ಸವಾರರು ಮೊಬೈಲ್‌ಗಳಲ್ಲಿ ದೃಶ್ಯ ದಾಖಲಿಸಿದ್ದಾರೆ.

ಮಾಹಿತಿ ಪಡೆದ ತಿರುಪ್ಪೂರು ಜಿಲ್ಲೆಯ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಕಾರನ್ನು ತಡೆಯಲು ಕಾರ್ಯಾಚರಣೆ ನಡೆಸಿದರು. ಸುಮಾರು 40 ಕಿ.ಮೀ. ಮುಂದುವರಿದ ಬೆನ್ನಟ್ಟುವಿಕೆ ಬಳಿಕ ಪೊಲೀಸರು ಮತ್ತು ಆಂಬ್ಯುಲೆನ್ಸ್‌ಗಳು ಕಾರನ್ನು ಸುತ್ತುವರಿದು ನಿಲ್ಲಿಸಿದವು. ಕಾರಿನಲ್ಲಿದ್ದ ಬಾಬು ಧಾರಾ (27) ತಕ್ಷಣ ಸಿಕ್ಕಿಬಿದ್ದರೆ, ರಾಜೇಶ್ (23) ಮತ್ತು ಸುರೇಶ್ (20) ಆರಂಭದಲ್ಲಿ ಪರಾರಿಯಾಗಿದ್ದರು. ಶೋಧ ಕಾರ್ಯಾಚರಣೆ ಬಳಿಕ ಅವರನ್ನೂ ಬಂಧಿಸಲಾಯಿತು. ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ, ಬೆಂಗಳೂರಿನಿಂದ ಕೊಯಮತ್ತೂರಿಗೆ ತಂಬಾಕು ಉತ್ಪನ್ನಗಳನ್ನು ವಿತರಿಸಲು ಸಾಗಿಸುತ್ತಿದ್ದುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ತನಿಖೆ ಮುಂದುವರಿದಿದೆ. ವೆಲ್ಮುರುಗನ್ ಅವರನ್ನು ರಕ್ಷಿಸಲು ನೆರವಾದ ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಸ್ವಯಂಸೇವಕರನ್ನೂ ಪ್ರಶಂಸಿಸಲಾಗಿದೆ.