Home ಸುದ್ದಿ ರಾಷ್ಟ್ರೀಯ ಉಜ್ಜಯಿನಿ ಶಾಹಿ ಮಸೀದಿ ಭಾಗಶಃ ತೆರವು; ಘರ್ಷಣೆ, ಕಲ್ಲು ತೂರಾಟ

ಉಜ್ಜಯಿನಿ ಶಾಹಿ ಮಸೀದಿ ಭಾಗಶಃ ತೆರವು; ಘರ್ಷಣೆ, ಕಲ್ಲು ತೂರಾಟ

ಉಜ್ಜಯಿನಿ,ಸೆ.೨೮: ಉಜ್ಜಯಿನಿಯಲ್ಲಿ ಇಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಅಗಲೀಕರಣ ಕಾಮಗಾರಿಗಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಕೆಲವರು ಪೊಲೀಸರತ್ತ ಕಲ್ಲುತೂರಾಟ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಗುಂಪನ್ನು ಚದುರಿಸಿದರು.


ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯನ್ನೂ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸಿಂಹಸ್ಥ ಕುಂಭಮೇಳದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಖಾಜಾ ವಾಲಿ ಮಸೀದಿಯಿಂದ ಗಣೇಶ್ ಚೌಕ್‌ವರೆಗೆ ಸಂಪರ್ಕ ಕಲ್ಪಿಸುವ ೭೩೦ ಮೀಟರ್ ಉದ್ದದ ರಸ್ತೆಯನ್ನು ಅಗಲೀಕರಣ ಮಾಡಲು ಯೋಜಿಸಲಾಗಿದೆ. ಈ ಯೋಜನೆಯಡಿ ಧಾರ್ಮಿಕ ಸ್ಥಳಗಳು ಸೇರಿದಂತೆ ಒಟ್ಟು ೨೭೨ ಕಟ್ಟಡಗಳು ಪರಿಣಾಮಕ್ಕೊಳಗಾಗಲಿವೆ.


ಈ ರಸ್ತೆ ಅಗಲೀಕರಣ ಯೋಜನೆಯ ಅಂದಾಜು ವೆಚ್ಚ ೯.೮ ಕೋಟಿ ರೂಪಾಯಿ ಎಂದು ತಿಳಿಸಲಾಗಿದೆ. ರಸ್ತೆ ಅಗಲೀಕರಣ ಯೋಜನೆಗಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಉಜ್ಜಯಿನಿ ಮಹಾನಗರ ಪಾಲಿಕೆಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು.