Home Lead News ಭಯೋತ್ಪಾದನೆ ಸಮರ್ಥನೆಗೆ ಅವಕಾಶವಿಲ್ಲ

ಭಯೋತ್ಪಾದನೆ ಸಮರ್ಥನೆಗೆ ಅವಕಾಶವಿಲ್ಲ

ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಜೈಶಂಕರ್ ವಾಗ್ದಾಳಿ

ವಿಶ್ವಸಂಸ್ಥೆ, ಸೆ.೨೭: ಭಯೋತ್ಪಾದನೆಯನ್ನು ಸಮರ್ಥಿಸಲು ಹಾಗೂ ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾರೆ.

ಪಾಕಿಸ್ತಾನವನ್ನು ‘ಸರಣಿ ಭಯೋತ್ಪಾದನೆಯ ಅನುಷ್ಠಾನಕ’ ಎಂದು ಉಲ್ಲೇಖಿಸಿದ ಅವರು, ಭಯೋತ್ಪಾದನೆಗೆ ಬೆಂಬಲ ನೀಡುವವರು ತಮ್ಮ ಮಾರ್ಗವನ್ನು ಬದಲಿಸಬೇಕು ಎಂದು ತೀಕ್ಷ್ಣವಾಗಿ ಜೈಶಂಕರ್ ಹೇಳಿದರು.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, ಪಾಕಿಸ್ತಾನವು ಸಭೆಯ ಮುಂದೆ ವಾಸ್ತವಾಂಶಗಳನ್ನು ತಪ್ಪಾಗಿ ನಿರೂಪಿಸಲು ಹಾಗೂ ಭಯೋತ್ಪಾದನೆಯನ್ನು ಸಹಜಗೊಳಿಸುವ ರೀತಿಯಲ್ಲಿ ವಾದ ಮಂಡಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.

“ನಿನ್ನೆ ಸರಣಿ ಭಯೋತ್ಪಾದನೆಯ ಅನುಷ್ಠಾನಕನೊಬ್ಬ ಈ ಸಭೆಯ ಮುಂದೆ ವಾಸ್ತವಾಂಶಗಳನ್ನು ತಪ್ಪಾಗಿ ನಿರೂಪಿಸಿದ. ಭಯೋತ್ಪಾದನೆಯನ್ನು ಸಾಮಾನ್ಯವೆಂದು ಬಿಂಬಿಸುವ ಹಾಗೂ ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯುವ ಪ್ರಯತ್ನ ನಡೆಯಿತು. ಅದು ನಡೆಯಲು ಸಾಧ್ಯವಿಲ್ಲ,” ಎಂದು ಜೈಶಂಕರ್ ಹೇಳಿದರು.

ಭಯೋತ್ಪಾದನೆಯ ವಿರುದ್ಧ ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಭಯೋತ್ಪಾದನೆಯೊಂದಿಗೆ ಸ್ನೇಹ, ಸದ್ಭಾವನೆ ಮತ್ತು ಸಹಕಾರ ಒಂದೇ ಸಮಯದಲ್ಲಿ ಸಾಗಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಿಂದೆ ಮಾಡಿಕೊಂಡಿರುವ ಯಾವುದೇ ತಿಳುವಳಿಕೆಗಳನ್ನೂ ಮರುಪರಿಶೀಲಿಸಬೇಕಾಗುತ್ತದೆ ‘ಭಯೋತ್ಪಾದನೆ ನಡೆಸುವವರೇ ತಮ್ಮ ಮಾರ್ಗವನ್ನು ಸರಿಪಡಿಸಿಕೊಳ್ಳಬೇಕು” ಎಂದು ಜೈಶಂಕರ್ ಸ್ಪಷ್ಟಪಡಿಸಿದರು.

ಮಧ್ಯಪ್ರಾಚ್ಯ ಮತ್ತು ಕೊಲ್ಲಿ ಪ್ರದೇಶದಲ್ಲಿ ಮುಂದುವರಿದಿರುವ ಸಂಘರ್ಷವು ಈಗಾಗಲೇ ಸಂಕಷ್ಟದಲ್ಲಿರುವ ಜಾಗತಿಕ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ ಎಂದು ಜೈಶಂಕರ್ ಕಳವಳ ವ್ಯಕ್ತಪಡಿಸಿದರು.“ಸಂಘರ್ಷದಿಂದ ದೂರವಿರುವ ದೇಶಗಳೂ ಯಾವುದೇ ತಪ್ಪಿಲ್ಲದೆ ಅದರ ಪರಿಣಾಮಗಳನ್ನು ಎದುರಿಸುತ್ತಿವೆ. ಆದರೆ, ಹೆಚ್ಚು ಪರಿಣಾಮಕ್ಕೊಳಗಾಗುವವರಿಗೆ ತಮ್ಮ ಮಾತು ಹೇಳುವ ಅವಕಾಶವೇ ಕಡಿಮೆ,” ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಜಾಗತಿಕ ಸವಾಲುಗಳನ್ನು ಎದುರಿಸಲು ತಮ್ಮಿಂದ ಸಾಧ್ಯವಾದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳು ಹಾಗೂ ನಾವಿಕರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಜೈಶಂಕರ್ ತೀವ್ರವಾಗಿ ಖಂಡಿಸಿದರು. ವಾಣಿಜ್ಯ ಸಾಗಣೆಯನ್ನು ಗುರಿಯಾಗಿಸುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದರು.

ಎಲ್ಲಾ ಸಂಘರ್ಷಪಕ್ಷಗಳು ಸಂಯಮ ವಹಿಸಿ ಉದ್ವಿಗ್ನತೆ ಕಡಿಮೆ ಮಾಡಬೇಕು. ನಾಗರಿಕರ ಸುರಕ್ಷತೆ ಹಾಗೂ ಇಂಧನ ಮತ್ತು ವಾಣಿಜ್ಯದ ನಿರಂತರ ಹರಿವಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಸಂಘರ್ಷದ ಪರಿಣಾಮ ಜಾಗತಿಕ ವ್ಯಾಪಾರ, ಇಂಧನ ಪೂರೈಕೆ ಹಾಗೂ ಪ್ರಮುಖ ಜಲಮಾರ್ಗಗಳಲ್ಲಿನ ವಾಣಿಜ್ಯ ಸಾಗಣೆಯ ಮೇಲೆ ಬೀರುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್ ಈ ವಿಚಾರವನ್ನು ಪ್ರಸ್ತಾಪಿಸಿದರು.

ಉಕ್ರೇನ್ ಯುದ್ಧ ಅಂತ್ಯಗೊಳ್ಳಲಿ

ಐದನೇ ವರ್ಷಕ್ಕೆ ಕಾಲಿಟ್ಟಿರುವ ಉಕ್ರೇನ್ ಸಂಘರ್ಷವೂ ಗಂಭೀರ ಕಳವಳದ ವಿಷಯವಾಗಿದೆ ಎಂದು ಜೈಶಂಕರ್ ಹೇಳಿದರು. ದೀರ್ಘಕಾಲದ ಯುದ್ಧಗಳಿಗೆ ಅಂತ್ಯ ಹಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಉಲ್ಲೇಖಿಸಿದ ಅವರು, “ಅಂತ್ಯವಿಲ್ಲದ ಯುದ್ಧ ಕೊನೆಗೊಂಡು, ಯುದ್ಧಕ್ಕೇ ಅಂತ್ಯ ಬರಬೇಕಾಗಿದೆ” ಎಂಬ ಸಂದೇಶ ನೀಡಿದರು.

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡುತ್ತದೆ ಎಂದ ಅವರು, ಶಾಂತಿ ಪ್ರಕ್ರಿಯೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ ನಾವಿಕರ ಸುರಕ್ಷತೆ, ಆಹಾರ ಧಾನ್ಯಗಳ ನಿರಂತರ ಪೂರೈಕೆ ಹಾಗೂ ಇಂಧನದ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಭಾರತದ ಅಭಿವೃದ್ಧಿಯನ್ನೂ ಜೈಶಂಕರ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪ್ರಸ್ತಾಪಿಸಿದರು. ಆರೋಗ್ಯ, ಪೌಷ್ಟಿಕತೆ, ಶಿಕ್ಷಣ, ಕುಡಿಯುವ ನೀರು, ವಿದ್ಯುತ್, ರಸ್ತೆ ಹಾಗೂ ವಸತಿ ಕ್ಷೇತ್ರಗಳಲ್ಲಿನ ಪ್ರಗತಿ ದೇಶದ ಜನರ ಜೀವನಮಟ್ಟವನ್ನು ಸುಧಾರಿಸಿದೆ ಎಂದು ಹೇಳಿದರು.

ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು ಆರನೇ ಒಂದು ಭಾಗದ ಜನರನ್ನು ಒಳಗೊಂಡಿರುವ ಭಾರತದ ಅಭಿವೃದ್ಧಿಯ ಅನುಭವವು ಸುಸ್ಥಿರ ಅಭಿವೃದ್ಧಿ ಗುರಿಗಳ ಜಾಗತಿಕ ಪ್ರಗತಿಗೂ ಕೊಡುಗೆ ನೀಡುತ್ತಿದೆ ಎಂದು ಅವರು ವಿವರಿಸಿದರು.

ಪಾಕಿಸ್ತಾನವನ್ನು ‘ಸರಣಿ ಭಯೋತ್ಪಾದನೆಯ ಅನುಷ್ಠಾನಕ’ ಎಂದು ಜೈಶಂಕರ್ ಉಲ್ಲೇಖ.
ಭಯೋತ್ಪಾದನೆಗೆ ಯಾವುದೇ ರೀತಿಯ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಂದೇಶ.

ಭಯೋತ್ಪಾದನೆಯ ವಿರುದ್ಧ ಭಾರತಕ್ಕೆ ಆತ್ಮರಕ್ಷಣೆಯ ಹಕ್ಕಿದೆ ಎಂದು ಪ್ರತಿಪಾದನೆ.
ಕೊಲ್ಲಿ ಸಂಘರ್ಷದಿಂದ ದೂರದ ರಾಷ್ಟ್ರಗಳೂ ಪರಿಣಾಮ ಎದುರಿಸುತ್ತಿವೆ ಎಂದ ಜೈಶಂಕರ್.

ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗೆ ತೀವ್ರ ಖಂಡನೆ.
ಇಂಧನ ಮತ್ತು ಜಾಗತಿಕ ವಾಣಿಜ್ಯ ಹರಿವು ನಿರಂತರವಾಗಿರಬೇಕು ಎಂದು ಕರೆ.

ಉಕ್ರೇನ್ ಯುದ್ಧಕ್ಕೆ ಶಾಂತಿಯುತ ಪರಿಹಾರಕ್ಕೆ ಭಾರತ ಬೆಂಬಲ.
ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ವಿದ್ಯುತ್, ರಸ್ತೆ, ವಸತಿ ಕ್ಷೇತ್ರಗಳ ಭಾರತದ ಪ್ರಗತಿ ಪ್ರಸ್ತಾಪ.