
ಬೆಂಗಳೂರು,ಸೆ.೨೮ – ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರದ ಮೂರು ತಂಡಗಳು ರಾಜ್ಯಕ್ಕೆ ಆಗಮಿಸಲಿದ್ದು, ಈಗಾಗಲೇ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯ ಆಧಾರದ ಮೇಲೆ ತಂಡಗಳು ಅಧ್ಯಯನ ನಡೆಸಿ ವರದಿ ನೀಡಲಿವೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇನ್ನಷ್ಟು ತಾಲ್ಲೂಕುಗಳಲ್ಲಿ ಬರದ ‘ಗ್ರೌಂಡ್ ಟ್ರೂತಿಂಗ್’ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೇಂದ್ರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. “ಅಕ್ಟೋಬರ್ ಮೊದಲ ವಾರದೊಳಗೆ ಬರದ ಸಂಪೂರ್ಣ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಅದರ ಆಧಾರದ ಮೇಲೆ ಮೂರು ತಂಡಗಳು ಪರಿಶೀಲನೆ ನಡೆಸಲಿವೆ. ಎಲ್ಲ ತಾಲ್ಲೂಕುಗಳನ್ನೂ ಅಧ್ಯಯನಕ್ಕೆ ಒಳಪಡಿಸುವಂತೆ ಮತ್ತೊಂದು ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಬರ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ರಚಿಸಿರುವ ಸರ್ವಪಕ್ಷ ನಿಯೋಗದೊಂದಿಗೆ ಬರುವುದಿಲ್ಲ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಪರಮೇಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬರ ಪಕ್ಷ ನೋಡಿ ಬರುತ್ತದೆಯೇ? ಬರ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಎಲ್ಲರೂ ನಿಯೋಗದೊಂದಿಗೆ ಬರಬೇಕು” ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ರಾಜ್ಯದ ಬಿಜೆಪಿ ನಾಯಕರು ಸರ್ವಪಕ್ಷ ನಿಯೋಗದೊಂದಿಗೆ ಬಂದರೆ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟವನ್ನು ಪರಿಣಾಮಕಾರಿಯಾಗಿ ಮನವರಿಕೆ ಮಾಡಲು ನೆರವಾಗಲಿದೆ. ಬಿಜೆಪಿ ನಾಯಕರನ್ನು ಮತ್ತೊಮ್ಮೆ ನಿಯೋಗದೊಂದಿಗೆ ಬರುವಂತೆ ಆಹ್ವಾನಿಸಲಾಗುವುದು ಎಂದರು.
“ಅವರು ಬರದಿದ್ದರೆ ನಾವು ಏನು ಮಾಡಲು ಸಾಧ್ಯ? ರೈತರ ಬಗ್ಗೆ ಕಾಳಜಿ ಇದ್ದರೆ ನಿಯೋಗದೊಂದಿಗೆ ಬರಬೇಕು” ಎಂದು ಪರಮೇಶ್ವರ್ ಹೇಳಿದರು. ಕೇಂದ್ರದಿಂದ ಬರ ಪರಿಹಾರ ದೊರೆಯದಿದ್ದರೆ ಮುಂದಿನ ಕ್ರಮದ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ಕಳೆದ ಬಾರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದೆವು. ಈ ಬಾರಿ ಅಂತಹ ಪರಿಸ್ಥಿತಿ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ವ್ಯಯವಾಗುತ್ತಿರುವ ಕುರಿತು ಸ್ವಪಕ್ಷೀಯರಿಂದಲೇ ಅಪಸ್ವರ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಬೇಕಾಗುತ್ತದೆ ಎಂಬುದು ಆರಂಭದಲ್ಲಿಯೇ ಎಲ್ಲರಿಗೂ ತಿಳಿದಿರುವ ವಿಚಾರ ಎಂದರು.
ಗ್ಯಾರಂಟಿಗಳಿಂದ ರಾಜ್ಯದ ಹಣಕಾಸಿನ ಮೇಲೆ ಸಹಜವಾಗಿಯೇ ಒತ್ತಡ ಉಂಟಾಗುತ್ತದೆ. ಆದರೂ ಕಳೆದ ಮೂರು ವರ್ಷಗಳಿಂದ ಹಣಕಾಸಿನ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಬರಲಾಗಿದೆ. ಮುಂದೆಯೂ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.
“ಹಣಕಾಸಿನ ಹೊರೆ ಇದ್ದರೂ ಅದನ್ನು ನಿರ್ವಹಿಸಿಕೊಂಡು ಬಂದಿದ್ದೇವೆ. ಮೂರು ವರ್ಷಗಳಿಂದ ಹಣಕಾಸಿನ ವಿಚಾರವನ್ನು ನಿರ್ವಹಣೆ ಮಾಡಿದ್ದೇವೆ. ಮುಂದೆಯೂ ಅದನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ. ಅವರವರ ವ್ಯಾಪ್ತಿಯಲ್ಲಿ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಅಷ್ಟೇ” ಎಂದು ಪರಮೇಶ್ವರ್ ಹೇಳಿದರು.























