Home ಮುಖಪುಟ ಸುದ್ದಿ ಚಿನ್ನ, ಬೆಳ್ಳಿಗೆ ಗುರಿಯಿಟ್ಟ ನೀರೂ ಬಾಕ್ಸರ್ ನಲ್ಲಿ ಪರ್ವೀನ್ ಅಂಕುಶ್ ಫೈನಲ್‌ಗೆ

ಚಿನ್ನ, ಬೆಳ್ಳಿಗೆ ಗುರಿಯಿಟ್ಟ ನೀರೂ ಬಾಕ್ಸರ್ ನಲ್ಲಿ ಪರ್ವೀನ್ ಅಂಕುಶ್ ಫೈನಲ್‌ಗೆ

ಏಷ್ಯನ್ ಗೇಮ್ಸ್

ನಗೋಯಾ, ಸೆ.೨೯: ಟ್ರ್ಯಾಪ್ ಶೂಟರ್ ಗಳು ಇಂದು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಪರಿಣಾಮ ಭಾರತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಬೇಟೆಯನ್ನು ಮುಂದುವರಿಸಿದೆ. ಜತೆಗೆ ಪದಕ ಪಟ್ಟಿಯಲ್ಲಿ ಅಗ್ರ ಹತ್ತರೊಳಗೆ ಸೇರುವ ಹಾದಿಯಲ್ಲಿದೆ.


ಇಂದು ನಡೆದ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ಫೈನಲ್ ಸ್ಪರ್ಧೆಯಲ್ಲಿ ನೀರೂ ಧಂಡ ಅವರು ೬ ಸಿರೀಸ್ ನಲ್ಲಿ ಒಟ್ಟು ೨೮ ಅಂಕಗಳನ್ನು ಗಳಿಸಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದು ಹಾಲಿ ಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತ ಒಲಿದ ಎರಡನೇ ಹಾಗೂ ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನ ಹಾಗೂ ಒಟ್ಟಾರೆ ಐದನೇ ಸ್ವರ್ಣ ಪದಕವಾಗಿದೆ.


ಐಚಿಯಲ್ಲಿನ ಪ್ರತಿಕೂಲ ವಾತಾವರಣದ ನಡುವೆಯೂ ನಿಖರ ಗುರಿಕಾಯ್ದುಕೊಂಡ ನೀರೂ ಪ್ರತಿಸ್ಪರ್ಧಿಗಳಿಗೆ ದಿಟ್ಟ ಪ್ರತಿರೋಧ ನೀಡುತ್ತಾ ಗುರಿಯತ್ತ ಮುನ್ನಡೆದರು. ಈ ವರ್ಷದ ಐಎಸ್ ಎಸ್ ಎಫ್ ವಿಶ್ವ ಕಪ್ ನ ಟ್ರ್ಯಾಪ್ ಶೂಟಿಂಗ್ ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಹಿರಿಮೆ ಹೊಂದಿದ್ದ ನೀರೂ ಫೈನಲ್ ಪ್ರವೇಶಿಸಿ ಬಂಗಾರದ ಭರವಸೆ ಹೆಚ್ಚಿಸಿದ್ದರು.


ಇದಕ್ಕೂ ಮುನ್ನ ಭಾರತದ ಮಹಿಳಾ ಶೂಟರ್ ಗಳು ಟ್ರ್ಯಾಪ್ ತಂಡ ವಿಭಾಗದಲ್ಲಿ ಎರಡನೇ ಸ್ಥಾನಕ್ಕೆ ಕುಸಿದು ಬೆಳ್ಳಿಯೊಂದಿಗೆ ಸ್ಪರ್ಧೆ ಮುಗಿಸಿತು. ಆದರೆ ಪುರುಷರ ಟ್ರ್ಯಾಪ್ ತಂಡ ಆರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.


ವೈಯಕ್ತಿಕ ವಿಭಾಗದಲ್ಲಿ ನೀರೂ ಚಿನ್ನ ಗೆಲ್ಲುವ ಮೊದಲು ತಂಡ ವಿಭಾಗದಲ್ಲಿ ಅಶಿಮಾ ಅಹ್ಲಾವತ್ ಮತ್ತು ಮನಿಷಾ ಕೀರ್ ಅವರೊಂದಿಗೆ ನೀರೂ ದೇಶಕ್ಕೆ ಬೆಳ್ಳಿ ತಂದುಕೊಟ್ಟರು. ಭಾರತ ೩೨೮ ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದರೆ, ಚೀನಾ ೩೪೬ ಅಂಕಗಳೊಂದಿಗೆ ಮೊದಲ ಸ್ಥಾನ ಗೆದ್ದುಕೊಂಡಿತು. ೩೨೫ ಅಂಕಗಳನ್ನು ಕಲೆಹಾಕಿದ ಕುವೈತ್ ಮೂರನೇ ಸ್ಥಾನಕ್ಕೆಸಮಾಧಾನಪಟ್ಟುಕೊಂಡಿತು.


ಸದ್ಯ ಭಾರತ ೫ ಚಿನ್ನ, ೨೧ ಬೆಳ್ಳಿ ಮತ್ತು ೨೨ ಕಂಚು ಸೇರಿ ಒಟ್ಟು ೪೮ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ೧೧ನೇ ಸ್ಥಾನದಲ್ಲಿದೆ.


ಕ್ರಿಕೆಟ್: ಭಾರತ ? ಶ್ರೀಲಂಕಾ ಸೆಮಿಫೈನಲ್ ಫೈಟ್


ನೇಪಾಳ ಮತ್ತು ಶ್ರೀಲಂಕಾ ನಡುವಿನ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯ ೨ನೇ ಕ್ವಾರ್ಟರ್ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಶ್ರೇಯಾಂಕ ಆಧಾರದ ಮೇರೆಗೆ ಶ್ರೀಲಂಕಾ ನಾಲ್ಕರ ಘಟ್ಟ ತಲುಪಿದ್ದು, ಇದೇ ೩೦ರಂದು ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಮಾಡಿಕೊಂಡಿತು. ಭಾನುವಾರ ನಡೆಯಬೇಕಿದ್ದ ಭಾರತ ಮತ್ತು ಆಫ್ಘನ್ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಪ್ರತಿಕೂಲ ಹವಾಮಾನ ದಿಂದಾಗಿ ರದ್ದುಗೊಂಡಿತು. ಹೀಗಾಗಿ ಭಾರತ ಯಾವುದೇ ಪಂದ್ಯ ಆಡದೇ ಸೆಮಿಫೈನಲ್ ಪ್ರವೇಶಿಸಿದೆ.


ಬಾಕ್ಸರ್ ನರೇಂದ್ರ ಕಂಚಿನ ಪಂಚ್


ಬಾಕ್ಸರ್ ನರೇಂದರ್ ಪುರುಷರ +೯೦ ಕೆ.ಜಿ. ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕಜಕಸ್ತಾನದ ಐಬೇಕ್ ಒರಾಲ್ಬೇ ವಿರುದ್ಧ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಹಾಲಿ ಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ. ಈ ಮಧ್ಯೆ, ಮಹಿಳೆಯರ ೬೫ ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಚೀನಾದ ಲಿ ಶು ವಿರುದ್ಧ ಜಯ ಗಳಿಸಿದ ಪರ್ವೀನ್ ಫೈನಲ್ ಪ್ರವೇಶಿಸಿದ್ದು, ಕನಿಷ್ಠ ಬೆಳ್ಳಿ ಪದಕವನ್ನು ಖಾತರಿಪಡಿಸಿದ್ದಾರೆ.


ಅಂತೆಯೇ ಅಂಕುಶ್ ಫಂಘಾಲ್ ಸಹ ಪುರುಷರ ೮೦ ಕೆ.ಜಿ ವಿಭಾಗದ ಸೆಮಿಫೈನಲ್ ನಲ್ಲಿ ಉಜ್ಬೇಕಿಸ್ತಾನದ ಫಜಿಲ್ದಿನ್ ವಿರುದ್ಧ ಗೆದ್ದು ಅಂತಿಮ ಸುತ್ತಿಗೆ ತೇರ್ಗಡೆ ಹೊಂದಿದ್ದು, ಭಾರತಕ್ಕೆ ಕನಿಷ್ಠಪಕ್ಷ ಬೆಳ್ಳಿಯನ್ನು ಖಾತರಿಗೊಳಿಸಿದ್ದಾರೆ.


ಇಂದು ಸಂಜೆ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿದ್ದು ಭಾರತ ಇನ್ನಷ್ಟು ಪದಕಗಳನ್ನು ಬಾಚುವ ನಿರೀಕ್ಷೆಯಿದೆ.