
ಬೆಂಗಳೂರು, ಸೆ.೨೯-ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ತಡರಾತ್ರಿ ಆರಂಭವಾದ ಮಳೆ ಮುಂಜಾನೆಯವರೆಗೂ ಸುರಿದಿದೆ. ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಾತ್ರಿ ಸುಮಾರು ೩.೩೦ರ ವೇಳೆಯಿಂದ ನಗರದ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದ್ದು, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಔಟರ್ ರಿಂಗ್ ರಸ್ತೆ, ಬಳಗೆರೆ, ಬೆಳ್ಳಂದೂರು ಸೇರಿದಂತೆ ಪೂರ್ವ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ. ಮಳೆಯ ನೀರು ರಸ್ತೆಗಳಲ್ಲಿ ನಿಂತ ಪರಿಣಾಮ ಕೆಲವೆಡೆ ಕೆರೆಯಂತಾಗಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಯಿತು.
ವಿಶೇಷವಾಗಿ ವೈಟ್‌ಫೀಲ್ಡ್ ಸುತ್ತಮುತ್ತ ಮಳೆಯಿಂದಾಗಿ ಕೆಲವೆಡೆ ಸಂಚಾರ ದಟ್ಟಣೆ ಉಂಟಾಯಿತು. ಸುರಿಯುತ್ತಿದ್ದ ಮಳೆಯ ನಡುವೆಯೇ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕಾಡುಬೀಸನಹಳ್ಳಿ ರಸ್ತೆಯೂ ರಾತ್ರಿ ಸುರಿದ ಮಳೆಗೆ ಜಲಾವೃತಗೊಂಡಿತ್ತು.
ಕೆಆರ್ ಸರ್ಕಲ್, ವಸಂತನಗರ, ವಿಧಾನಸೌಧ, ಶಿವಾಜಿನಗರ, ರಾಜಾಜಿನಗರ, ಎಸ್‌ಆರ್ ನಗರ, ಯಶವಂತಪುರ, ಮೆಜೆಸ್ಟಿಕ್, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಬಸವನಗುಡಿ, ಜಯನಗರ, ಶಾಂತಿನಗರ, ಜೆ.ಪಿ.ನಗರ ಹಾಗೂ ಲಾಲ್‌ಬಾಗ್ ಸೇರಿದಂತೆ ನಗರದ ಹಲವು ಭಾಗಗಳಲ್ಲೂ ಮಳೆಯಾಗಿದೆ.
ಮಲ್ಲೇಶ್ವರಂನಲ್ಲಿ ಮರ ಬಿದ್ದು ಎರಡು ಕಾರು ಜಖಂ:
ಮಳೆಯ ನಡುವೆ ಮಲ್ಲೇಶ್ವರಂ ಸ್ಮಾರ್ಟ್ ಬಜಾರ್ ಮುಂಭಾಗದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ರಸ್ತೆಗಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಮರದ ಕೆಳಗೆ ನಿಂತಿದ್ದ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ.
ಮರ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ನಗರಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಇದರಿಂದ ಕೆಲಕಾಲ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಮಲ್ಲೇಶ್ವರಂ ಮಾತ್ರವಲ್ಲದೆ ಕೋರಮಂಗಲದಲ್ಲೂ ಮಳೆಯಿಂದಾಗಿ ಮರ ಉರುಳಿರುವ ಘಟನೆ ವರದಿಯಾಗಿದೆ. ಎರಡು ಕಡೆ ಮರಗಳು ಧರೆಗುರುಳಿದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತಾಗಿದೆ.
ರಾತ್ರಿಯಿಡೀ ಹಗುರದಿಂದ ಸಾಧಾರಣವಾಗಿ ಮಳೆ ಸುರಿದಿದ್ದು, ಮುಂಜಾನೆಯಲ್ಲೂ ಜಿಟಿಜಿಟಿ ಮಳೆ ಮುಂದುವರಿದಿದೆ. ಬೆಳಗ್ಗೆ ಕೆಲಸ, ಶಾಲೆ-ಕಾಲೇಜು ಹಾಗೂ ಇತರ ಕೆಲಸಗಳಿಗೆ ಹೊರಟ ಜನರಿಗೆ ಮಳೆ ಅಡ್ಡಿಯಾಗಿದೆ. ಮಳೆಯ ನಡುವೆಯೇ ವಾಹನ ಸಂಚಾರ ಆರಂಭವಾಗಿದ್ದು, ಜಲಾವೃತ ರಸ್ತೆಗಳ ನಡುವೆ ಸವಾರರು ನಿಧಾನವಾಗಿ ಸಾಗುವಂತಾಗಿದೆ.
ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ;
ಇದೇ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಚಿತ್ರದುರ್ಗ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ.
ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ.ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್;
ಇಂದು ತುಮಕೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದರ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿರುವುದರಿಂದ ಜನರು ಹಾಗೂ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಐಟಿ ಕಾರಿಡಾರ್ ಜಲಾವೃತ
ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆಯೂ ಸುರಿದ ಮಳೆಯಿಂದ ನಗರದ ಹಲವು ಭಾಗಗಳಲ್ಲಿ ಜಲಾವೃತ ಉಂಟಾಯಿತು. ವಿಶೇಷವಾಗಿ ನಗರದ ಐಟಿ ಕಾರಿಡಾರ್‌ನ ಹಲವು ರಸ್ತೆಗಳು ನೀರಿನಿಂದ ತುಂಬಿಕೊಂಡ ಪರಿಣಾಮ ಬೆಳಗಿನ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಸೋಮವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯ ಬಳಿಕ ಇಂದು ಬೆಳಗ್ಗೆ ಮತ್ತೆ ಮಳೆ ಆರಂಭವಾಯಿತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಸೆ.೨೯ರಿಂದ ಅ.೧ರವರೆಗೆ ಸಾಕಷ್ಟು ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕದಲ್ಲೂ ದಿನವಿಡೀ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ೨೩ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅನುಭವಕ್ಕೆ ೨೫ ಡಿಗ್ರಿಯಷ್ಟಿತ್ತು. ಆಕಾಶ ಬಹುತೇಕ ಮೋಡ ಕವಿದಿತ್ತು. ನೈಋತ್ಯ ದಿಕ್ಕಿನಿಂದ ಗಂಟೆಗೆ ೧೧ ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಗಾಳಿಯ ವೇಗ ಕೆಲ ಸಂದರ್ಭಗಳಲ್ಲಿ ೨೦ ಕಿ.ಮೀ.ವರೆಗೆ ತಲುಪಿತ್ತು.
ಮಧ್ಯಾಹ್ನದ ವೇಳೆಗೆ ತಾಪಮಾನ ಸುಮಾರು ೨೯ ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ನಿರೀಕ್ಷೆಯಿದ್ದು, ಸಂಜೆ ವೇಳೆಗೆ ಮತ್ತೆ ಇಳಿಕೆಯಾಗಲಿದೆ. ಬೆಳಗ್ಗೆ ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ದಿನ ಕಳೆದಂತೆ ಮಳೆಯ ಸಾಧ್ಯತೆ ಹೆಚ್ಚಲಿದ್ದು, ಸಂಜೆ ಶೇ.೫೦ಕ್ಕಿಂತ ಅಧಿಕವಾಗುವ ಸಾಧ್ಯತೆ ಇದೆ. ಕೆಲವೆಡೆ ಮಧ್ಯಾಹ್ನ ಅಥವಾ ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ಸೂಚಿಸಿದೆ.
ಐಎಂಡಿ ಮುನ್ಸೂಚನೆಯ ಪ್ರಕಾರ ಬೆಂಗಳೂರಿನಲ್ಲಿ ಅ.೨ರವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಅ.೩ರಿಂದ ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

























