
ವಿಜಯಪುರ,ನ.24– “ರಾಷ್ಟ್ರಕೂಟರು, ಕದಂಬರು, ಹೊಯ್ಸಳರು, ಚಾಲುಕ್ಯರು, ಶ್ರೀ ಕೃಷ್ಣದೇವರಾಯ ಹಾಗೂ ಇಮ್ಮಡಿ ಪುಲಿಕೇಶಿಯಂತಹ ಮಹಾನ್ ದೊರೆಗಳು ಆಳಿದ ನಾಡು ನಮ್ಮದು. ಕನ್ಯಾಕುಮಾರಿಯಿಂದ ಒರಿಸ್ಸಾ, ಮಧ್ಯಪ್ರದೇಶದವರೆಗೂ ವಿಸ್ತರಿಸಿದ್ದ ವಿಶಾಲ ಪರಂಪರೆ ಕರ್ನಾಟಕಕ್ಕಿದ್ದು, ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ನಾಡಿನ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡಬೇಕು” ಎಂದು ರಾಜ್ಯ ಸಹಕಾರ ಸಚಿವ ಕೆ.ಎಚ್. ಮುನಿಯಪ್ಪ ಕರೆ ನೀಡಿದರು.
ಪಟ್ಟಣದ ಅಂಗತಟ್ಟಿನಂ ಜುಂಡಪ್ಪ ವೃತ್ತದಲ್ಲಿ ಎಚ್. ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎ.ಪಿ. ರಂಗನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಬಲವಾದ ಐತಿಹಾಸಿಕ ಹಿನ್ನೆಲೆಯಿದೆ. ಆದಿಕವಿ ಪಂಪ, ರನ್ನ, ಜನ್ನ, ಕುಮಾರವ್ಯಾಸರಿಂದ ಹಿಡಿದು ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಂತಹ ಮಹಾನ್ ಸಾಹಿತಿಗಳು ಕನ್ನಡ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಇಂದು ರಾಷ್ಟ್ರಮಟ್ಟದಲ್ಲೂ ನಮ್ಮ ಕನ್ನಡ ಭಾಷೆಗೆ ಅತ್ಯುನ್ನತ ಸ್ಥಾನಮಾನವಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ಲಕ್ಷ್ಮೀನಾರಾಯಣ್, ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಕೈಗಾರಿಕೆಗಳು ಸ್ಥಾಪನೆಯಾಗಿ ಬೆಳೆಯುತ್ತಿದ್ದರೂ ಸ್ಥಳೀಯ ಕನ್ನಡಿಗರಿಗೆ ಸಮರ್ಪಕವಾಗಿ ಉದ್ಯೋಗ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಾ. ಸರೋಜಿನಿ ಮಹಿಷಿ ವರದಿಯ ಅನ್ವಯ ಎಲ್ಲಾ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು, ಇದಕ್ಕಾಗಿ ಕನ್ನಡಿಗರು ಸಂಘಟಿತರಾಗಿ ಹೋರಾಡಬೇಕಿದೆ ಎಂದು ಅವರು ಎಚ್ಚರಿಸಿದರು.
ರಾಜ್ಯೋತ್ಸವದ ಪ್ರಯುಕ್ತ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡಪರ ಹೋರಾಟಗಾರರು ಹಾಗೂ ರೈತ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಜೆ ತುಮಕೂರಿನ ‘ಜ್ಯೋತಿ ಮೆಲೋಡಿಸ್’ ತಂಡದಿಂದ ರಸಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿ ನೆರೆದಿದ್ದವರನ್ನು ರಂಜಿಸಿತು.
ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವಿ. ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಎಂ. ಸತೀಶ್ ಕುಮಾರ್, ಮಾಜಿ ಸದಸ್ಯರಾದ ನಾರಾಯಣಸ್ವಾಮಿ, ರಾಜಣ್ಣ, ಇಕ್ಬಾಲ್, ಹನೀಫ್ ಉಲ್ಲಾ, ಬೈರೇಗೌಡ, ನಂದಕುಮಾರ್, ಸಿ.ಎಂ. ರಾಮು, ವಿ.ಎಂ. ನಾಗರಾಜು, ನರಸಿಂಹಮೂರ್ತಿ, ಭುಜೇಂದ್ರ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಬಮುಲ್ ನಿರ್ದೇಶಕ ಎಚ್.ಪಿ. ಮುನಿರಾಜು, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಜೆಡಿಎಸ್ ಮುಖಂಡ ಹನುಮಂತಪ್ಪ, ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್, ಕರವೇ ಜಿಲ್ಲಾ ಉಪಾಧ್ಯಕ್ಷ ಅಣ್ಣಮ್ಮ ತಾಯಿ ಸುರೇಶ್, ತಾಲೂಕು ಅಧ್ಯಕ್ಷ ಓಂಕಾರ್, ನಗರ ಅಧ್ಯಕ್ಷ ಸಂತೋಷ್, ದೇವನಹಳ್ಳಿ ತಾಲೂಕು ಉಪಾಧ್ಯಕ್ಷ ಕೇಶವ್, ಸಮರ ಸೇನಾ ಅಧ್ಯಕ್ಷ ಮಹೇಶ್, ಜೆಸಿಐ ಅಧ್ಯಕ್ಷೆ ಇಂಪನಾ, ಕಲಾವಿದ ವೆಂಕಟೇಶ್, ಮುಖಂಡರಾದ ಕೊಕೋಕೋಲಾ ಮಂಜುನಾಥ್, ಕೆ.ಎ. ಮಧು, ಮರವೇ ನಾರಾಯಣಸ್ವಾಮಿ, ಗ್ಯಾಸ್ ಸೀನಪ್ಪ, ಮಹೇಶ್, ಆರ್.ಎಂ.ಸಿ. ಟಿ. ಮಂಜುನಾಥ್, ಕುಶಾಂತ್, ವೇಣು, ಸುಹೇಲ್, ಕಿರಣ್, ಜಬಿ, ಮುನಿರಾಮ್, ಅನಿಲ್ ಸೇರಿದಂತೆ ಹಲವು ಗಣ್ಯರು ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.



















