
ಧಾರವಾಡ, ಜು೩: ಕರ್ನಾಟಕ ಇತಿಹಾಸದಲ್ಲಿ ಬಹಳಷ್ಟು ರಾಜ-ಮಹಾರಾಜರು ಆಗಿಹೋಗಿದ್ದಾರೆ. ಆದರೆ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡುವ ಮೂಲಕ ಇಂದು ವಿಶ್ವದ ಭೂಪಟದಲ್ಲಿ ಬೆಂಗಳೂರು ಎದ್ದು ಕಾಣುವಂತೆ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
ಅವರು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ನಾಡಪ್ರಭು ಶ್ರೀ ಕೆಂಪೇಗೌಡ ಅವರು ೫೦೦ ವರ್ಷಗಳ ಹಿಂದೆ ಹಾಕಿಕೊಟ್ಟ ದೂರದೃಷ್ಟಿಯ ಯೋಜನೆಗಳು ಕರ್ನಾಟಕಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಕೆಂಪೇಗೌಡರ ಸರ್ವಧರ್ಮ ಸಮನ್ವಯತೆ, ಯೋಜನಾಬದ್ಧ ನಗರ ನಿರ್ಮಾಣ ಕಾರ್ಯ, ಕೃಷಿ ಪರಿಸರ ಬೆಳವಣಿಗೆಗೆ ಜಾರಿಗೆ ತಂದ ನೀತಿಗಳು, ವ್ಯಾಪಾರ, ವಾಣಿಜ್ಯ, ಉದ್ಯೋಗಕ್ಕಾಗಿ ಅವರು ಅಂದು ಹಾಕಿಕೊಟ್ಟ ಯೋಜನೆಗಳೇ ಇಂದಿಗೂ ಮಾದರಿಯಾಗಿವೆ. ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಕಾರಣ ಕೆಂಪೇಗೌಡರ ಕೊಡುಗೆಗಳು ಎಂದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವರದಶ್ರೀ ಪೌಂಡೇಶನ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ, ಹಾಗೂ ಕಾರ್ಯದರ್ಶಿ ಸಿದ್ದು ಸಿರಸಂಗಿ ಅವರು ನಾಡಪ್ರಭು ಶ್ರೀ ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ಜಯಲಕ್ಷಿö್ಮÃ ಹೆಚ್. ಅವರು ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ, ಸಮಾಜದ ಮುಖಂಡರಾದ ಕೃಷ್ಣಗೌಡ, ರಾಘವೇಂದ್ರಗೌಡ, ಮಾಣಿಕ್ಯ ಚಿಲ್ಲೂರ, ಹನುಮಂತಪ್ಪ ನೇಗಿನಾಳ ಉಪಸ್ಥಿತರಿದ್ದರು.
ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು, ಸಂಘ-ಸಮಾಜದ ಮುಖಂಡರು, ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.































