Home ಜಿಲ್ಲೆ ಮಂಗಳೂರು ಇಸ್ರೇಲ್‌ನಲ್ಲಿ ಮಂಗಳೂರು ವ್ಯಕ್ತಿ ನಿಗೂಢ ಸಾವು

ಇಸ್ರೇಲ್‌ನಲ್ಲಿ ಮಂಗಳೂರು ವ್ಯಕ್ತಿ ನಿಗೂಢ ಸಾವು

ಮಂಗಳೂರು,ನ.೨೫- ಉದ್ಯೋಗ ಅರಸಿ ಇಸ್ರೇಲ್‌ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ಮೂಲದ ಶಡ್ರಕ್ ಇಮ್ಯಾನುವಲ್ ಮೃತಪಟ್ಟಿರುವುದು ದೃಢಪಟ್ಟಿದೆ.
ಶಡ್ರಕ್ ಇಮ್ಯಾನುವಲ್ (೪೧) ಅವರ ಮೃತದೇಹವು ೩೭ ದಿನಗಳ ಬಳಿಕ ಇಸ್ರೇಲ್ ನಿಂದ ತಾಯ್ನಾಡಿಗೆ ಮರಳಿದೆ.


ಕಳೆದ ಅ.೧೬ರಂದು ಕುಟುಂಬಸ್ಥ ರೊಂದಿಗೆ ಕೊನೆಯದಾಗಿ ಮಾತ ನಾಡಿದ್ದ ಶಡ್ರಕ್, ಆ ಬಳಿಕ ನಾಪತ್ತೆ ಯಾಗಿದ್ದರು. ಇದೀಗ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ದಾಖಲೆಗಳ ಪ್ರಕಾರ, ಅಕ್ಟೋಬರ್ ೧೯ರಂದೇ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಆದರೆ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.


ಶಡ್ರಕ್ ಅವರ ಸಹೋದರಿ ಸವಿತಾ ಅವರು ಸಾವಿನ ಸುದ್ದಿಯನ್ನು ದೃಢಪಡಿಸಿದ್ದು, ಮೃತದೇಹವನ್ನು ಮಂಗಳೂರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನವೆಂಬರ್ ೯ರಂದು ಮೃತದೇಹ ಸಾಗಾಟಕ್ಕೆ ನಿರಾಕ್ಷೇಪಣಾ ಪತ್ರ ನೀಡಿತ್ತು.


ಮೃತರ ಪತ್ನಿ ಡೇಸಿ ಇಮ್ಯಾನುವಲ್ ಅವರ ಮನವಿಯ ಮೇರೆಗೆ ಸಹೋದರಿ ಸವಿತಾ ಕೆ.ಎಸ್. ಮತ್ತು ಚಂದ್ರಮೋಹನ ಚಂದ್ರನ್ ಅವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೃತದೇಹ ಸ್ವೀಕರಿಸಲು ಅನುಮತಿ ನೀಡಲಾಗಿತ್ತು.


ಕುಟುಂಬಸ್ಥರ ಮಾಹಿತಿ ಪ್ರಕಾರ, ನವೆಂಬರ್ ೨೫ರ ಮಧ್ಯಾಹ್ನ ೩ ಗಂಟೆಗೆ ಶಕ್ತಿನಗರದ ಕಾರ್ಮಿಕ ಕಾಲೋನಿಯ ೧ನೇ ಕ್ರಾಸ್‌ನಲ್ಲಿರುವ ’ಅಮೇಜಿಂಗ್ ಗ್ರೇಸ್ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಸಂಜೆ ೪ ಗಂಟೆಗೆ ಅಂತಿಮ ಯಾತ್ರೆ ಹೊರಟು ಮಂಗಳೂರಿನ ಗೋರಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.


ಶಡ್ರಕ್ ಇಮ್ಯಾನುವಲ್ ಅವರು ೨೦೨೫ರ ಮೇ ೧೬ರಂದು ಮಂಗಳೂರಿನ ನೇಮಕಾತಿ ಸಂಸ್ಥೆಯೊಂದರ ಮೂಲಕ ಅಧಿಕೃತ ಉದ್ಯೋಗ ವೀಸಾದಡಿ ಇಸ್ರೇಲ್‌ಗೆ ತೆರಳಿದ್ದರು.


ನಜರೆತ್ ಸಮೀಪದ ನೊಫ್ ಹಗಲಿಲ್‌ನಲ್ಲಿರುವ ಯುಸಿಟಿ ಫ್ಲೂಯಿಡ್ ಸೊಲ್ಯೂಷನ್ಸ್ ಕಂಪನಿಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.


೨೦೨೬ರ ಅಕ್ಟೋಬರ್ ೧೬ರಂದು ರಾತ್ರಿ ೮.೦೫ರ ಸುಮಾರಿಗೆ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಸುಮಾರು ೨೨ ನಿಮಿಷಗಳ ಕಾಲ ವಾಟ್ಸ್‌ಆಪ್ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು. ಅದಾದ ಬಳಿಕ ಅವರ ಸಂಪರ್ಕ ಕಡಿತಗೊಂಡಿತ್ತು. ಕೆಲಸದ ಸ್ಥಳದಲ್ಲಿಯೂ ಅವರು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು.


ಪತ್ತೆಗಾಗಿ ಮನವಿ:

ಶಡ್ರಕ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಪತ್ನಿ ಡೇಸಿ ಇಮ್ಯಾನುವಲ್ ಹಾಗೂ ಸಹೋದರಿ ಸವಿತಾ ಅವರು ನಗರ ಪೊಲೀಸ್ ಆಯುಕ್ತರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡಿ ಪತ್ತೆಹಚ್ಚುವಂತೆ ಮನವಿ ಮಾಡಿದ್ದರು.


ಆದರೆ, ಅಕ್ಟೋಬರ್ ೧೬ರಂದು ಕುಟುಂಬದೊಂದಿಗೆ ಕೊನೆಯದಾಗಿ ಮಾತನಾಡಿದ್ದ ಶಡ್ರಕ್, ಅಕ್ಟೋಬರ್ ೧೯ರಂದೇ ಮೃತಪಟ್ಟಿರುವುದು ಇದೀಗ ಬೆಳಕಿಗೆ ಬಂದಿದೆ. ಸಾವಿನ ನಿಖರ ಕಾರಣ ತಿಳಿಯದಿರುವುದು ಕುಟುಂಬಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ೩೭ ದಿನಗಳ ಕಾಯುವಿಕೆಯ ಬಳಿಕ ಮೃತದೇಹ ತಾಯ್ನಾಡಿಗೆ ಮರಳಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.