Home ಜಿಲ್ಲೆ ಮಕ್ಕಳ ಪೌಷ್ಟಿಕತೆ, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ತಾಯಂದಿರು ಕಾಳಜಿ ವಹಿಸಬೇಕು: ಅರವಿಂದ ಹಾಗರಗಿ

ಮಕ್ಕಳ ಪೌಷ್ಟಿಕತೆ, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ತಾಯಂದಿರು ಕಾಳಜಿ ವಹಿಸಬೇಕು: ಅರವಿಂದ ಹಾಗರಗಿ

ವಿಜಯಪುರ, ಅ.9: ಗರ್ಭಿಣಿಯರು ಹಾಗೂ ಬಾಣಂತಿಯರು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಮಹತ್ವದ ಕುರಿತು ತಾಯಂದಿರು ಅರಿವು ಹೊಂದಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಗ್ರಾಮೀಣ ಮತ್ತು ನಗರ ಶಿಶು ಅಭಿವೃದ್ಧಿ ಯೋಜನೆಗಳ ಸಹಯೋಗದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೆÇೀಷಣ್ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ-2026ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಣ್ಣು-ತರಕಾರಿಗಳಲ್ಲಿರುವ ವಿವಿಧ ಪೆÇೀಷಕಾಂಶಗಳ ಮಹತ್ವವನ್ನು ತಿಳಿಸಿದ ಅವರು, ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಅತ್ಯಗತ್ಯ. ಆರೋಗ್ಯಕರ ಆಹಾರ ಪದ್ಧತಿಯನ್ನು ಜೀವನದ ಅವಿಭಾಜ್ಯ ಭಾಗವನ್ನಾಗಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಂತೋಷಕುಮಾರ ಹೆಚ್. ಮಾತನಾಡಿ, ಪ್ರಸಕ್ತ ಸಾಲಿನ ಪೆÇೀಷಣ್ ಮಾಸಾಚರಣೆಯ ‘ನಮ್ಮ ಅಂಗನವಾಡಿ-ನಮ್ಮ ಜವಾಬ್ದಾರಿ’ ಧ್ಯೇಯದಂತೆ ತಾಯಿ-ಮಗುವಿನ ಆರೋಗ್ಯ, ಪೌಷ್ಟಿಕತೆ ಹಾಗೂ ಸುರಕ್ಷಿತ ಮಾತೃತ್ವಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯ ಸೇವೆ ಮತ್ತು ಅಗತ್ಯ ವೈದ್ಯಕೀಯ ಸಲಹೆಗಳನ್ನು ಒದಗಿಸುವ ಮೂಲಕ ಅಪೌಷ್ಟಿಕತೆ ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ನಿರೂಪಣಾಧಿಕಾರಿ ನಿರ್ಮಲಾ ಎಚ್. ಸುರಪುರ ಅವರು ಪೆÇೀಷಣ್ ಮಾಸಾಚರಣೆಯ ಉದ್ದೇಶ ಹಾಗೂ ಮಹತ್ವ ವಿವರಿಸಿದರು. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಹೆರಿಗೆ ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದ ತಾಯಿಗೆ ನೇರ ನಗದು ವರ್ಗಾವಣೆ ಮೂಲಕ ಪೆÇ್ರೀತ್ಸಾಹಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಿರುವ ತಾಯಿಯ ಎದೆಹಾಲು ಶೇಖರಣಾ ಘಟಕದ ಕುರಿತು ಡಾ. ಗಾಯತ್ರಿ ಮಿಸಾಳೆ ಮಾಹಿತಿ ನೀಡಿದರು. ಎದೆಹಾಲಿನ ಮಹತ್ವ ಹಾಗೂ ಅಗತ್ಯವಿರುವ ಶಿಶುಗಳಿಗೆ ಘಟಕದಿಂದ ದೊರೆಯುವ ಪ್ರಯೋಜನಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಆರ್‍ಸಿಎಚ್ ಅಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಕಾಳೆ, ವಿಜಯಪುರ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಸಿ. ಮ್ಯಾಗೇರಿ, ವಿಜಯಪುರ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಗಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೀಮಂತ ಕಾರ್ಯಕ್ರಮ ಹಾಗೂ ಹೆಣ್ಣು ಮಗುವಿನ ಹುಟ್ಟುಹಬ್ಬ ಆಚರಿಸುವ ಮೂಲಕ ತಾಯಿ ಮತ್ತು ಮಗುವಿನ ಪೌಷ್ಟಿಕತೆ ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಯಿತು.
ಎಸ್.ಸಿ. ಮ್ಯಾಗೇರಿ ಸ್ವಾಗತಿಸಿದರು. ಇಂಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಗಳೂರು ವಂದಿಸಿದರು. ಜಿಲ್ಲಾ ಮಿಷನ್ ಸಂಯೋಜಕಿ ಭಾರತಿ ಹೊನಳಿ ನಿರೂಪಿಸಿದರು.