
ಕೋಲಾರ, ನ. 27- ನಗರದಲ್ಲಿನ ಕಸ ವಿಲೇವಾರಿ ನಿರ್ಲಕ್ಷ್ಯ ಹಾಗೂ ಆಡಳಿತಾತ್ಮಕ ಲೋಪಗಳ ವಿರುದ್ಧ ಕೆಂಡಾಮಂಡಲವಾದ ಶಾಸಕ ಕೊತ್ತೂರು ಮಂಜುನಾಥ್ ಅವರು, “ನನ್ನ ಬಾಯಿಗೆ ಫಿಲ್ಟರ್ ಇಲ್ಲ. ನಾನು ಮಾತನಾಡಲು ಶುರು ಮಾಡಿದರೆ ಸಾಮ್ರಾಣಿ ಇಟ್ಟಿಬಿಡುತ್ತೇನೆ” ಎಂದು ನಗರಸಭೆ ಆಯುಕ್ತ ವೆಂಕಟೇಶ್ ನಾಗನೂರು ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಹೆಚ್.ಸಿ. ಬಾಲಕೃಷ್ಣ ಅವರ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಾನು ನಯಾ ಪೈಸೆ ಪಡೆಯದೆ ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತೇನೆ, ನಿಮ್ಮಿಂದ ಒಂದು ಲೋಟ ಕಾಫಿಯನ್ನೂ ನಿರೀಕ್ಷಿಸಿಲ್ಲ. ಅದನ್ನು ನೆನಪಿನಲ್ಲಿಟ್ಟುಕೊಂಡು ನಿಯತ್ತಿನಿಂದ ಕೆಲಸ ಮಾಡಿ” ಎಂದು ತಾಕೀತು ಮಾಡಿದರು.
ಇದೇ ವೇಳೆ ನಗರಸಭೆಯ ಅಕ್ರಮಗಳನ್ನು ಬಯಲಿಗೆಳೆದ ಶಾಸಕರು, 4 ಸಾವಿರ ರೂ. ಬೆಲೆಯ ಸಿಸಿಟಿವಿ ಕ್ಯಾಮೆರಾಕ್ಕೆ 1.6 ಲಕ್ಷ ರೂ. ಬಿಲ್ ಮಾಡಿರುವುದು ಹಾಗೂ ನ್ಯಾಯಾಲಯದ ಆದೇಶವಿಲ್ಲದೆ ಹಳೆಯ ಮರಣಗಳಿಗೆ ಮತ್ತು ಬದುಕಿದ್ದವರಿಗೆ ಡೆತ್ ಸರ್ಟಿಫಿಕೇಟ್ ನೀಡಿರುವ ಬಗ್ಗೆ ಗಂಭೀರ ಆರೋಪ ಮಾಡಿದರು.
ಪೌರಾಯುಕ್ತರು ಸಿಬ್ಬಂದಿ ಕೊರತೆಯ ಸಬೂಬು ನೀಡಿದಾಗ ಅಸಮಾಧಾನಗೊಂಡ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು, “ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾಗಿ ಕೈಗೊಳ್ಳಿ, ಇಲ್ಲವಾದರೆ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿ ಸಭೆಯಿಂದ ನಿರ್ಗಮಿಸಿದರು.




















