
ಕೋಲಾರ, ನ. 26: ನಗರದ ಶ್ರೀ ನರಸಿಂಹರಾಜ (ಎಸ್ಎನ್ಆರ್) ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಅಡುಗೆ ಕೋಣೆ, ಒಪಿಡಿ ಕೌಂಟರ್, ವಾರ್ಡ್ಗಳು ಹಾಗೂ ಸ್ವಚ್ಛತಾ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದರು. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ಅಸ್ವಚ್ಛತೆಯನ್ನು ಕಂಡು ಕೆಂಡಾಮಂಡಲರಾದ ಜಿಲ್ಲಾಧಿಕಾರಿಗಳು, ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮೊದಲಿಗೆ ಆಸ್ಪತ್ರೆಯ ಅಡುಗೆ ಕೋಣೆಗೆ ಭೇಟಿ ನೀಡಿದ ಅವರು, ರೋಗಿಗಳಿಗೆ ತಯಾರಿಸುತ್ತಿದ್ದ ಆಹಾರ, ತರಕಾರಿ ಹಾಗೂ ಬ್ರೆಡ್ನ ಗುಣಮಟ್ಟವನ್ನು ಪರಿಶೀಲಿಸಿದರು. ಕೊಳೆತ ಟೊಮೇಟೊ, ಸೀಮೆ ಬದನೇಕಾಯಿ, ಮೂಲಂಗಿ, ಪಡವಾಳಕಾಯಿ ಹಾಗೂ 200 ಮಂದಿಗೆ ಕೇವಲ 2 ಕೆಜಿ ತರಕಾರಿ ಬಳಸುತ್ತಿರುವ ಅವೈಜ್ಞಾನಿಕ ಪ್ರಮಾಣವನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಿದರು. ಅಲ್ಲದೆ, ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವ ಗುತ್ತಿಗೆದಾರರ ವಿಳಾಸ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಜಿಎಸ್ಟಿ ವಿವರಗಳನ್ನು ತಕ್ಷಣವೇ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಪಕ್ಕದ ಬೇಕರಿಯಿಂದ ಪೂರೈಸುತ್ತಿರುವ ಬ್ರೆಡ್ನ ತಯಾರಿಕಾ ದಿನಾಂಕದ ಬಗ್ಗೆಯೂ ಪ್ರಶ್ನಿಸಿದ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯೊಬ್ಬರಿಗೆ ಅಮಾನತು ಮಾಡುವ ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಆವರಣ ಮತ್ತು ಕಟ್ಟಡದ ವಿವಿಧ ಭಾಗಗಳಲ್ಲಿ ಕಸದ ರಾಶಿ ಹಾಗೂ ಜೇಡರ ಬಲೆಗಳು ತುಂಬಿರುವುದನ್ನು ಕಂಡ ಜಿಲ್ಲಾಧಿಕಾರಿಗಳು, ಸ್ವಚ್ಛತಾ ಕಾರ್ಯದ ಹೊಣೆ ಹೊತ್ತಿರುವ ಹೊರಗುತ್ತಿಗೆ ಏಜೆನ್ಸಿ ಹಾಗೂ ಮೇಲ್ವಿಚಾರಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “136 ಮಂದಿ ಸ್ವಚ್ಛತಾ ಸಿಬ್ಬಂದಿ ಇದ್ದರೂ ಆಸ್ಪತ್ರೆ ಯಾಕೆ ಇಷ್ಟು ಗಲೀಜಾಗಿದೆ? ಇಲ್ಲಿನ ಬ್ಯಾಕ್ಟೀರಿಯಾಗಳಿಂದ ರೋಗಿಗಳಿಗೆ ಮತ್ತಷ್ಟು ಕಾಯಿಲೆಗಳು ಹರಡುವುದಿಲ್ಲವೇ?” ಎಂದು ಪ್ರಶ್ನಿಸಿದರು. ಈ ವೇಳೆ ಅಧಿಕಾರಿಯೊಬ್ಬರು ಕಟ್ಟಡದ ವೈರಿಂಗ್ ಮತ್ತು ನವೀಕರಣದ ಬಗ್ಗೆ ಸಮಜಾಯಿಷಿ ನೀಡಲು ಮುಂದಾದಾಗ ಗರಂ ಆದ ಜಿಲ್ಲಾಧಿಕಾರಿಗಳು, “ನಾನು ಕಸ ಮತ್ತು ಸ್ವಚ್ಛತೆಯ ಬಗ್ಗೆ ಕೇಳಿದರೆ ನೀವು ವೈರಿಂಗ್ ಬಗ್ಗೆ ಮಾತನಾಡುತ್ತೀರಾ? ನನ್ನನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ” ಎಂದು ಖಡಕ್ ಎಚ್ಚರಿಕೆ ನೀಡಿದರು.
ನಂತರ ಒಪಿಡಿ ಕೌಂಟರ್ ಮತ್ತು ನೋಂದಣಿ ವಿಭಾಗಕ್ಕೆ ಭೇಟಿ ನೀಡಿದ ಅವರು, ಸರತಿ ಸಾಲು ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆ ಮಾಡುವಂತೆ ಹಾಗೂ ಕೌಂಟರ್ಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿದರು. ನೋಂದಣಿ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಮತ್ತು ಕಡಿಮೆ ದಾಖಲಾತಿ ಕಂಡು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಕಚೇರಿಯಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ತಾಕೀತು ಮಾಡಿದರು.
ಇದೇ ವೇಳೆ ಆಸ್ಪತ್ರೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಹಳೆಯ ಅಲ್ಮೇರಾಗಳು ಹಾಗೂ 3-4 ಟನ್ನಷ್ಟು ನಿರುಪಯುಕ್ತ ವಸ್ತುಗಳು ರಾಶಿ ಬಿದ್ದಿರುವುದನ್ನು ಗಮನಿಸಿದ ಅವರು, ಅವುಗಳ ವಿಲೇವಾರಿಗೆ ಸಂಬಂಧಿಸಿದ ಕಡತವನ್ನು ತಕ್ಷಣವೇ ಮಂಡಿಸಿ, ಖಾಲಿ ಕೊಠಡಿಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು. ಜೊತೆಗೆ, ಆಸ್ಪತ್ರೆ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ತ್ರಿಚಕ್ರ ವಾಹನವೊಂದನ್ನು ಕಂಡು ಆರ್ಟಿಒ ಅಧಿಕಾರಿಗಳಿಗೆ ಕರೆ ಮಾಡಿ ವಾಹನವನ್ನು ಜಪ್ತಿ ಮಾಡಲು ಆದೇಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.




















