Home Uncategorized ಗೌತಮ್ ನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ 167ನೇ ಹುಣ್ಣಿಮೆ ಪೂಜೆ ಹಾಗೂ ಅನ್ನಸಂತರ್ಪಣೆ

ಗೌತಮ್ ನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ 167ನೇ ಹುಣ್ಣಿಮೆ ಪೂಜೆ ಹಾಗೂ ಅನ್ನಸಂತರ್ಪಣೆ

ಬಂಗಾರಪೇಟೆ,ನ.26- ಪಟ್ಟಣದ ಗೌತಮ್ ನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 167ನೇ ತಿಂಗಳ ಹುಣ್ಣಿಮೆ ಪೂಜಾ ಮಹೋತ್ಸವವು ಸೇವಾ ಟ್ರಸ್ಟ್ ಹಾಗೂ ಬೂದಿಕೋಟೆ ಹೋಬಳಿಯ ತೀತು ಬನಹಳ್ಳಿ ಗ್ರಾಮದ ಕದಿರಪ್ಪ, ವೆಂಕಟಮ್ಮ, ರಮೇಶ್, ನಾಗಲಕ್ಷ್ಮಿ, ಕೃಷ್ಣಮೂರ್ತಿ, ಲಾವಣ್ಯ ಹಾಗೂ ಮಕ್ಕಳಾದ ಸಾರಣ್ಯ ಆರ್., ದೀಕ್ಷಿತಾ ಆರ್., ತೇಜಸ್ ಆರ್., ಚೇತನ್ ಆರ್. ಅವರ ಕುಟುಂಬದವರ ಸಹಯೋಗದಲ್ಲಿ ವಿಜೃಂಭಣೆಯಿಂದ ನೆರವೇರಿತು. ಈ ಪ್ರಯುಕ್ತ ಬೆಳಿಗ್ಗೆಯಿಂದಲೇ ದೇವಿಗೆ ವಿಶೇಷ ಅಭಿಷೇಕ, ಆಕರ್ಷಕ ಪುಷ್ಪಾಲಂಕಾರ, ಮಹಾಮಂಗಳಾರತಿ ಹಾಗೂ ನೂರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು.

ಪೂಜಾ ಸೇವಾಕರ್ತರಾದ ರಮೇಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ, 167ನೇ ತಿಂಗಳ ಹುಣ್ಣಿಮೆ ಪೂಜೆ ಹಾಗೂ ಅನ್ನದಾನ ಸೇವೆ ನೆರವೇರಿಸುವ ಭಾಗ್ಯ ನಮ್ಮ ಕುಟುಂಬಕ್ಕೆ ದೊರೆತಿರುವುದು ತಾಯಿ ರೇಣುಕಾ ಯಲ್ಲಮ್ಮ ದೇವಿಯ ಕೃಪೆಯಾಗಿದೆ ಎಂದರು. ದೂರದ ಕ್ಷೇತ್ರಗಳಿಗೆ ತೆರಳಿ ಸೇವೆ ಸಲ್ಲಿಸುವುದರ ಜೊತೆಗೆ, ನಮ್ಮ ಸುತ್ತಮುತ್ತಲಿನ ಸ್ಥಳೀಯ ದೇವಾಲಯಗಳಲ್ಲಿ ಪೂಜೆ, ಹೋಮ, ಅನ್ನದಾನ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಾಗ ಭಕ್ತರಲ್ಲಿ ಭಕ್ತಿ ಭಾವನೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಯಿ ರೇಣುಕಾ ಯಲ್ಲಮ್ಮ ದೇವಿಯ ಸನ್ನಿಧಿಗೆ ಭೇಟಿ ನೀಡುವುದರಿಂದ ಭಕ್ತರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕು ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದ ಅವರು, ಎಲ್ಲಾ ದಾನಗಳಿಗಿಂತ ಅನ್ನದಾನವೇ ಅತ್ಯಂತ ಶ್ರೇಷ್ಠವಾಗಿದ್ದು, ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸವಾಗಿದೆ ಎಂದು ತಿಳಿಸಿದರು. ಸೇವಾ ಟ್ರಸ್ಟ್‌ನಿಂದ ಪ್ರತಿ ತಿಂಗಳು ನಿರಂತರವಾಗಿ ನಡೆಯುತ್ತಿರುವ ಹುಣ್ಣಿಮೆ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಗಳು ಅತ್ಯಂತ ಮಹತ್ವಪೂರ್ಣವಾಗಿವೆ ಎಂದು ಶ್ಲಾಘಿಸಿದ ರಮೇಶ್ ಅವರು, ತಾಯಿ ದೇವಿಯು ನಾಡಿಗೆ ಸುಭಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದ ಅಂಗವಾಗಿ ಸೇವಾ ಟ್ರಸ್ಟ್‌ನ ವತಿಯಿಂದ ಪೂಜಾ ಸೇವಾಕರ್ತರಾದ ರಮೇಶ್ ಮತ್ತು ಕೃಷ್ಣಮೂರ್ತಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರಾದ ನಾರಾಯಣ ಸ್ವಾಮಿ, ಪ್ರಮುಖರಾದ ಬಿ.ಜಿ. ವಿವೇಕಾನಂದ, ಎಂ. ದಯಾಕರ್, ವಿ. ನಾರಾಯಣಸ್ವಾಮಿ, ನಾಗರಾಜ್, ಕೆ. ರಾಜು, ಬಾಬು ಕೊಪ್ಪ, ಗಜೇಂದ್ರ, ವೆಂಕಟಾಚಲಪತಿ, ಅಶೋಕ್ ಕುಮಾರ್, ಲಕ್ಷ್ಮಯ್ಯ ವಿ. ಕವಿ, ರೆಡ್ಡಪ್ಪ, ಪ್ರಭಾಕರ್, ಶಶಿ, ಶಿವ, ಶ್ರೀನಿವಾಸ್, ಅಶೋಕ್, ಮುರುಗೇಶ್, ಕಿಶೋರ್, ಗುರುಮೂರ್ತಿ, ಚಲಪತಿ, ಶಿಕ್ಷಕರಾದ ನಾರಾಯಣ ಸ್ವಾಮಿ, ಮಂಜು ಕೊಪ್ಪ, ನಾಗರಾಜ್, ಮಂಜು, ಅರ್ಚಕರಾದ ಷಣ್ಮುಗನಾಥನ್ ಸೇರಿದಂತೆ ಪಾರ್ವತಮ್ಮ, ತಿಮ್ಮಕ್ಕ, ನೀಲಮ್ಮ, ಮಮತಾ, ಮಂಜುಳಾ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.