
ಶಿವಮೊಗ್ಗ, ನ.26-ಪ್ರವಾಸಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ನದಿಯಲ್ಲಿ ಸ್ನಾನ ಮಾಡಲು ಅಥವಾ ನೀರಿನಲ್ಲಿ ಇಳಿದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆಯಿಂದ ಯುವಕರ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯವಾಗಿ ತೀವ್ರ ದುಃಖದ ವಾತಾವರಣ ನಿರ್ಮಾಣವಾಗಿದೆ.
ಮೃತರನ್ನು ಕಾರ್ತಿಕ್ (31), ಪವನ್ (30), ನಕುಲ್ (19) ಹಾಗೂ ಚೇತನ್ (19) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ವಿವಿಧ ಪ್ರದೇಶಗಳ ನಿವಾಸಿಗಳು.
ಮದುವೆಗೆ ಬಂದಿದ್ದ ಸ್ನೇಹಿತರಿಗೆ ಕಾದಿತ್ತು ವಿಧಿ!
ನಾಲ್ವರೂ ಸ್ನೇಹಿತರು ಶಿವಮೊಗ್ಗದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬಂದಿದ್ದರು. ಮದುವೆ ಮುಗಿದ ಬಳಿಕ ಸಮೀಪದ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು.
ಗೂಗಲ್‌ನಲ್ಲಿ ಸಮೀಪದ ನದಿ ಪ್ರದೇಶವನ್ನು ಹುಡುಕಿ, ಗೂಗಲ್ ಮ್ಯಾಪ್ ಮೂಲಕ ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿಯ ತುಂಗಾ ನದಿ ತೀರಕ್ಕೆ ತೆರಳಿದ್ದರು ಎನ್ನಲಾಗಿದೆ.
ನದಿ ತೀರದಲ್ಲಿ ಕಾಲ ಕಳೆಯುತ್ತಿದ್ದಾಗ ಒಬ್ಬ ಯುವಕ ಈಜಲು ನೀರಿಗಿಳಿದಿದ್ದಾನೆ. ಈ ವೇಳೆ ಆತ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗತೊಡಗಿದ್ದಾನೆ. ಸ್ನೇಹಿತನನ್ನು ರಕ್ಷಿಸಲು ಉಳಿದ ಮೂವರು ಕೂಡ ನದಿಗೆ ಇಳಿದಿದ್ದಾರೆ. ಆದರೆ ದುರದೃಷ್ಟವಶಾತ್ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.



















