Home ಜಿಲ್ಲೆ ಬೆಂಗಳೂರು ಕ್ವಿಟ್ ವೋಟ್ ಚೋರಿ ಹೋರಾಟಕ್ಕೆ ಡಿಕೆಶಿ ಕರೆ

ಕ್ವಿಟ್ ವೋಟ್ ಚೋರಿ ಹೋರಾಟಕ್ಕೆ ಡಿಕೆಶಿ ಕರೆ

ಬೆಂಗಳೂರು,ಆ. ೯: ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಎತ್ತಿಹಿಡಿದ ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಪ್ರತಿಯೊಬ್ಬ ಕಾರ್ಯಕರ್ತ ಬದ್ಧರಾಗಬೇಕು ಎಂದು ನಾಯಕರು ಕರೆ ನೀಡಿದ್ದಾರೆ.


ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ‘೮೪ನೇ ಕ್ವಿಟ್ ಇಂಡಿಯಾ ಚಳುವಳಿ ನೆನಪಿನ ವರ್ಷಾಚಾರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಮತ ಚೋರಿ ವಿರುದ್ಧ ಹೋರಾಟಕ್ಕೆ ಕರೆ’ ಪಕ್ಷ ಮತ್ತು ದೇಶದ ಉಳಿವಿಗಾಗಿ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದು ಎಂದರು.


ದೇಶದಲ್ಲಿ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದ್ದು, ’ಕ್ವಿಟ್ ವೋಟ್ ಚೋರಿ’ ಚಳವಳಿಯನ್ನು ಪ್ರತಿಯೊಬ್ಬ ಕಾರ್ಯಕರ್ತನೂ ಕೈಗೆತ್ತಿಕೊಳ್ಳಬೇಕು. ೧೮ ವರ್ಷ ತುಂಬಿದ ಪ್ರತಿಯೊಬ್ಬರ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಪಕ್ಷಕ್ಕಾಗಿ ದುಡಿದ ೭೦ ವರ್ಷ ದಾಟಿದ ಹಿರಿಯ ಕಾರ್ಯಕರ್ತರನ್ನು ಗುರುತಿಸಿ ಶೀಘ್ರದಲ್ಲೇ ಸನ್ಮಾನಿಸಲಾಗುವುದು.

ರಾಜ್ಯದ ಪ್ರತಿ ಪಂಚಾಯಿತಿಯಲ್ಲಿ ೧೦,೦೦೦ ’ಭಾರತ್ ಜೋಡೋ ಯುವ ಶಕ್ತಿ ಸಂಘ’ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ೧ ಕೋಟಿ ಮೀಸಲಿಡಲಾಗಿದೆ.

ರಾಜ್ಯದ ೫ ಗ್ಯಾರಂಟಿ ಯೋಜನೆಗಳು ಇಂದು ಇಡೀ ದೇಶಕ್ಕೆ ಮಾದರಿಯಾಗಿವೆ. ವ್ಯಕ್ತಿ ಪೂಜೆ ಮಾಡದೆ, ಪಕ್ಷದ ತತ್ವ ಸಿದ್ಧಾಂತಗಳನ್ನು ಪೂಜಿಸುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಸಚಿವ ರಾಮಲಿಂಗರೆಡ್ಡಿ ಮಾತನಾಡಿ, “೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ದೇಶಕ್ಕೆ ಬಹುದೊಡ್ಡ ತಿರುವು ನೀಡಿತು. ಮಹಾತ್ಮಾ ಗಾಂಧೀಜಿ, ನೆಹರೂ, ಪಟೇಲ್ ಅವರಂತಹ ನಾಯಕರು ಜೈಲಿಗೆ ತೆರಳಿ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಅಂದು ಬ್ರಿಟಿಷರ ಜೊತೆ ಶಾಮೀಲಾಗಿದ್ದವರು ಇಂದು ದೇಶದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಕೇಂದ್ರದ ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ನಿರುದ್ಯೋಗದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ,” ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, “ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಅಥವಾ ಜನಸಂಘದ ಯಾವುದೇ ನಾಯಕರು ಭಾಗವಹಿಸಿದ ಒಂದೇ ಒಂದು ಉದಾಹರಣೆಯೂ ಇಲ್ಲ. ಶ್ಯಾಮಪ್ರಸಾದ್ ಮುಖರ್ಜಿ ಅಂದು ಕ್ವಿಟ್ ಇಂಡಿಯಾ ಚಳುವಳಿ ನಡೆಯಬಾರದು ಎಂದು ಬ್ರಿಟಿಷರಿಗೆ ಪತ್ರ ಬರೆದಿದ್ದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿದ ಹಿರಿಮೆ ಕಾಂಗ್ರೆಸ್‌ಗೆ ಸಲ್ಲುತ್ತದೆ. ಪ್ರಸ್ತುತ ನೈಜ ಮತದಾರರ ಹಕ್ಕುಗಳನ್ನು ಕಸಿಯುವ ಕೆಲಸವಾಗುತ್ತಿದ್ದು, ಇದನ್ನು ಒಗ್ಗಟ್ಟಿನಿಂದ ಎದುರಿಸಬೇಕಿದೆ,” ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಹಲವು ಮುಖಂಡರು, ನೂರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.