Home ಮುಖಪುಟ ಸುದ್ದಿ ಶಾಸಕರು ರೈತರ ಮನೆಗಳಲ್ಲಿ ತಂಗಲಿ

ಶಾಸಕರು ರೈತರ ಮನೆಗಳಲ್ಲಿ ತಂಗಲಿ

ಬೆಂಗಳೂರು, ನ.೨೬: ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವ ಬದಲು ರೈತರ ಮನೆಗಳಲ್ಲಿ ತಂಗುವ ಮೂಲಕ ಸರ್ಕಾರದ ಆರ್ಥಿಕ ಹೊರೆ ತಗ್ಗಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.

ಈ ಸಂಬಂಧ ವಿಧಾನಸಭಾಧ್ಯಕ್ಷರು, ವಿಧಾನಪರಿಷತ್ ಸಭಾಪತಿ, ಮುಖ್ಯಮಂತ್ರಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಶಾಸಕಾಂಗ ನಾಯಕರಿಗೆ ಪತ್ರ ಬರೆದಿರುವ ಅವರು, ರೈತರ ಮನೆಗಳಲ್ಲಿ ವಾಸ್ತವ್ಯ ಹೂಡುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ.

ಬೆಳಗಾವಿ ಸುತ್ತಮುತ್ತಲಿನ ನೂರಾರು ರೈತ ಕುಟುಂಬಗಳು ಶಾಸಕರು ಮತ್ತು ಅಧಿಕಾರಿಗಳಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಲು ಸಿದ್ಧವಾಗಿವೆ. ರೈತರ ಆತಿಥ್ಯ ಸ್ವೀಕರಿಸುವುದರಿಂದ ಹೋಟೆಲ್‌ಗಳ ವಸತಿ ಮತ್ತು ಊಟದ ವೆಚ್ಚ ಉಳಿಯಲಿದ್ದು, ಸರ್ಕಾರದ ಖಜಾನೆಯ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.


ರಾಜ್ಯದಲ್ಲಿ ಬರ ಪರಿಸ್ಥಿತಿ, ಬೆಲೆ ಏರಿಕೆ ಹಾಗೂ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಸೇರಿದಂತೆ ಹಲವು ಸವಾಲುಗಳಿವೆ. ಇಂತಹ ಸಂದರ್ಭದಲ್ಲಿ ಸರ್ಕಾರದ ವೆಚ್ಚ ಕಡಿಮೆ ಮಾಡಲು ರೈತರು ತಮ್ಮಿಂದ ಸಾಧ್ಯವಾದ ಸಹಕಾರ ನೀಡಲು ಮುಂದಾಗಿದ್ದಾರೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿ ವಿಚಾರದಲ್ಲಿ ಸರ್ಕಾರದ ನಿರ್ಧಾರವನ್ನು ರೈತರು ಒಪ್ಪಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ಗೌರವಧನ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿಯೂ ಸರ್ಕಾರಕ್ಕೆ ನೈತಿಕ ಬೆಂಬಲ ನೀಡಲು ರೈತರು ಸಿದ್ಧರಿದ್ದಾರೆ ಎಂದು ಶಾಂತಕುಮಾರ್ ಹೇಳಿದ್ದಾರೆ.

ಅಧಿವೇಶನದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು ವಾರಾಂತ್ಯದಲ್ಲಿಯೂ ವಿಧಾನಮಂಡಲದ ಕಲಾಪ ನಡೆಸಬೇಕು. ಪ್ರತಿದಿನ ಎರಡು ಗಂಟೆ ಹೆಚ್ಚುವರಿ ಕಲಾಪ ನಡೆಸುವ ಮೂಲಕ ನಿಗದಿತ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಜನರ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಸಮಯ ಮೀಸಲಿಡುವುದರ ಜತೆಗೆ ಸಾರ್ವಜನಿಕ ಹಣದ ಮಿತವ್ಯಯಕ್ಕೂ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.