Home ಜಿಲ್ಲೆ ಬೆಂಗಳೂರು ನಂಬಿಕೆಯಿಡಿ ಪ್ರತಿಭಟನೆ ಕೈ ಬಿಡಿ

ನಂಬಿಕೆಯಿಡಿ ಪ್ರತಿಭಟನೆ ಕೈ ಬಿಡಿ

ಬೆಂಗಳೂರು, ನ. ೨೬- ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಪರವಾಗಿದೆ. ಪ್ರತಿಷ್ಠೆ ಬಿಟ್ಟು ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆ ಆಶಾ ಕಾರ್ಯಕರ್ತೆಯರ ಜೊತೆ ಸಮಸ್ಯೆ ಪರಿಹಾರಕ್ಕೆ ಮಾತುಕತೆ ನಡೆಸುವುದಾಗಿ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು ಆಶಾ ಕಾರ್ಯಕರ್ತೆಯರ ವಿಚಾರ ಒಂದೇ ಅಲ್ಲ ಬೇರೆ ಬೇರೆ ವಿಚಾರಗಳಿಗೆ ಬೇರೆಯವರು ತಮ್ಮ ಬೇಡಿಕೆಗಳು ಈಡೇರಿಕೆಗಾಗಿ ಸಿದ್ಧರಾಗುತ್ತಿದ್ದಾರೆ. ಹಾಗಾಗಿ ಆಶಾ ಕಾರ್ಯಕರ್ತೆಯರು ತಾಳ್ಮೆ ತೆಗೆದುಕೊಳ್ಳಬೇಕು ಪ್ರತಿಭಟನೆ ಕೈಬಿಡಬೇಕು ಎಂದು ವಿನಮ್ರತೆಯಿಂದ ಮನವಿ ಮಾಡುವುದಾಗಿ ಹೇಳಿದರು.


ಸರ್ಕಾರವನ್ನು ಹೆದರಿಸುವ ಕೆಲಸವನ್ನು ಮಾಡಬಾರದು ಸರ್ಕಾರವನ್ನು ಹೆದರಿಸುವುದು ಸರಿಯಲ್ಲ ಎಂದರು. ನಮ್ಮ ಮೇಲೆ ನಂಬಿಕೆ ಇಡಿ ಸಮಸ್ಯೆ ಬಗೆಹರಿಸುತ್ತೇವೆ ಅದು ಬಿಟ್ಟು ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು. ಹಠಬೇಡ ಹೆಣ್ಣು ಎಂದರೆ ಕುಟುಂಬದ ಕಣ್ಣು ಎಂಬುದು ನಮಗೆ ಅರಿವಿದೆ ಅವರ ಸಮಸ್ಯೆ ಬಗೆಹರಿಸುತ್ತೇವೆ. ಪ್ರತಿಭಟನೆ ಕೈ ಬಿಡಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುನರುಚ್ಚರಿಸಿದರು.


ಇದು ಒಂದೇ ಇಲಾಖೆಗೆ ಸೇರಿದ್ದಲ್ಲ. ಇದರ ಪರಿಣಾಮ ಬಹಳ ವಿಪರೀತ ಇದೆ. ನಾನು ಹಣಕಾಸು ಅಧಿಕಾರಿಗಳೊಂದಿಗೂ ಐದಾರು ಬಾರಿ ಚರ್ಚಿಸಿದ್ದೇನೆ ತಾಳ್ಮೆವಹಿಸಿ ಎಂದು ಮುಖ್ಯಮಂತ್ರಿಗಳು ಹೇಳಿದರು.


ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಗ್ಯಾರಂಟಿಗಳನ್ನ ಅನುಷ್ಠಾನ ಮಾಡಿದ್ದೇವೆ ಅದೇ ರೀತಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಹೇಳಿದರು.


ಕೇಂದ್ರ ಸರ್ಕಾರದ ಮೇಲೂ ಒತ್ತಾಯ ಹೇರಬೇಕಲ್ಲವೇ ಯಾಕೆ ಅವರ ವಿರುದ್ಧ ನೀವು ಏನು ಮಾಡುತ್ತಿಲ್ಲ ಅವರು ಗೌರವ ಧನ ಏರಿಸಬಹುದಲ್ಲವೇ ಎಂದು ಮುಖ್ಯಮಂತ್ರಿ ಡಿ.P. ಶಿವಕುಮಾರ್ ಹೇಳಿದರು .


ಆಶಾ ಕಾರ್ಯಕರ್ತರು ಪ್ರತಿಭಟನೆ ವಿಚಾರವನ್ನು ರಾಜಕೀಯವಾಗಿ ಕೆಲವರು ಬಳಸಿಕೊಳ್ಳುತ್ತಿದ್ದಾರೆ ಬಿಜೆಪಿಯವರು ಪ್ರತಿಭಟನ ಸ್ಥಳಕ್ಕೆ ಹೋಗಿ ಬಂದಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವಧನ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ಜವಾಬ್ದಾರಿ ಇದೆ ಎಂದರು.


ಕೇಂದ್ರ ಸರ್ಕಾರ ಇದುವರೆಗೂ ಆಶಾ ಕಾರ್ಯಕರ್ತೆರ ಗೌರವ ಧನ ಏರಿಸಿಲ್ಲ. ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಪ್ರಧಾನಿ ಆಗಿದ್ದ ಡಾ. ಮನಮೋಹನ್ ಸಿಂಗ್ ಆಶಾ ಕಾರ್ಯಕರ್ತೆಯರ ಗೌರವಧನ ಏರಿಸಿದ್ದರು. ಅದು ಬಿಟ್ಟರೆ ಕೇಂದ್ರ ಸರ್ಕಾರ ಏನು ಮಾಡಿಲ. ಅವರ ವಿರುದ್ಧ ಮಾತ್ರ ಪ್ರತಿಭಟನೆ ಮಾಡಲ್ಲ. ಏಕೆ ನಮ್ಮ ಮೇಲೆ ಮಾತ್ರ ಹೊರೆ ಹಾಕುತ್ತಿದ್ದಾರೆ ಏಕೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು. ವಿಷಯ ಏನೇ ಇರಲಿ ನಾವಂತೂ ಆಶಾ ಕಾರ್ಯಕರ್ತೆಯರ ಪರ ಇದ್ದೇವೆ. ಅವರ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಇಂದು ನಾನು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ನಾಳೆ ಆಶಾ ಕಾರ್ಯಕರ್ತೆಯರ ಜೊತೆಯೂ ಮಾತನಾಡುತ್ತೇನೆ ಎಂದರು.


ಲಿಖಿತ ಭರವಸೆ ಇಲ್ಲ


ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ರೀತಿಯ ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಲಿಖಿತ ರೂಪದಲ್ಲಿ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಮ್ಮ ಮೇಲೆ ನಂಬಿಕೆಯಿಲ್ಲ ಎಂದರೆ ಏನು ಮಾಡಲು ಸಾಧ್ಯ. ನಮ್ಮ ಮಾತಿಗೆ ಗೌರವ ಕೊಡಿ ಎಂದು ಮನವಿ ಮಾಡಿದ್ದೇವೆ. ಒಬ್ಬರಿಗೆ ಲಿಖಿತ ರೂಪದಲ್ಲಿ ನೀಡಿದರೆ, ಮುಂದೆ ಇದೇ ಎಲ್ಲಾ ಕಡೆ ಶುರುವಾಗುತ್ತದೆ. ಎಲ್ಲರಿಗೂ ಲಿಖಿತ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.


ನಾವು ಗೌರವ ಕೊಡಬೇಕು, ಗೌರವ ಧನ ಕೊಡಬೇಕು. ಅವರ ಬೇಡಿಕೆಗೆ ಒಪ್ಪಿಕೊಳ್ಳಬೇಕು ಅದಕ್ಕೆ ಸ್ಪಂದಿಸೋಣ ಅವರ ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ತಾಯಿಂದಿರ ಬಳಿ ವಿನಮ್ರತೆಯಾಗಿ ಮನವಿ ಮಾಡುತ್ತೇವೆ ಎಂದರು.
ಆಶಾಕಾರ್ಯಕರ್ತೆಯರನ್ನು ನೇಮಕ ಮಾಡಿದ್ದು ಕೇಂದ್ರ ಸರ್ಕಾರ ಇವರುಗಳು ಕೇಂದ್ರ ಸರ್ಕಾರದ ಮುಂದೆ ಏಕೆ ಬೇಡಿಕೆ ಈಡುತ್ತಿಲ್ಲ ಎಂದು ಪ್ರಶ್ನಿಸಿದರು.

ಆಶೆಯರು ಇಲ್ಲದಿದ್ದರೂ ಆರೋಗ್ಯ ವ್ಯವಸ್ಥೆ ನಡೆಯುತ್ತೆ


ಆಶಾ ಕಾರ್ಯಕರ್ತೆಯರು ಸೇವೆ ಇಲ್ಲದಿದ್ದರೂ ಆರೋಗ್ಯ ವ್ಯವಸ್ಥೆ ನಡೆಯುತ್ತದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನರ್ಸ್‌ಗಳಿಗೆ ರೂ.೧೦,೦೦೦ ಶಿಕ್ಷಕರಿಗೆ ೧೨,೦೦೦ ಗೌರವಧನ ನೀಡಲಾಗುತ್ತಿದೆ. ಆಶಾಗಳಿಗೆ ೧೫೦೦೦ ಕೊಡಬೇಕಾ ಎಂದು ಪ್ರಶ್ನಿಸಿದರು.


ಗೌರವಧನ ಏರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸಿರುವ ಪ್ರತಿಭಟನೆ ವಿರುದ್ಧ ಗರಂ ಆಗಿ ಮಾತನಾಡಿರುವ ಸಚಿವ ಯುಟಿ ಖಾದರ್ ಕಳೆದ ಹತ್ತು ದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ ಅವರ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತಿದೆ ಏನಾದರೂ ಸಮಸ್ಯೆಯಾಗಿದೆಯೇ ಹಳ್ಳಿಗಳಲ್ಲಿ ಏನು ಸಮಸ್ಯೆ ಆಗಿಲ್ಲ ಹೆರಿಗೆ ಎಲ್ಲ ಸೇವೆಗಳು ನಡೆಯುತ್ತಿವೆ ಆಶ ಕಾರ್ಯಕರ್ತರೇ ತಮ್ಮ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು ತಮಿಳುನಾಡಿನಲ್ಲಿ ಆಶಾ ಕಾರ್ಯಕರ್ತರೇ ಇಲ್ಲ ಆದರೂ ಅಲ್ಲಿ ತಾಯಿ ಮರಣ, ಶಿಶು ಮರಣ ಪ್ರಮಾಣ ಕಡಿಮೆ ಇದೆ. ತಮಿಳುನಾಡಿನಲ್ಲೂ ಎಲ್ಲ ಚೆನ್ನಾಗಿಯೇ ನಡೆಯುತ್ತಿದೆ ಎಂದರು.

ಖಾದರ್ ಹೇಳಿಕೆಗೆ ಖಂಡನೆ


ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ವ್ಯವಸ್ಥೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ನೀಡಿರುವ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಸಚಿವರ ಮಾತು ನಮ್ಮ ಹೋರಾಟವನ್ನು ಕುಗ್ಗಿಸುವ ಪ್ರಯತ್ನ ಅದಕ್ಕೆ ನಾವು ಜಗ್ಗುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಹೇಳಿದ್ದಾರೆ. ಸಚಿವರ ಹೇಳಿಕೆಯನ್ನು ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಸೇರಿದಂತೆ ಪ್ರತಿಭಟನಾಕಾರರು ಖಂಡಿಸಿದ್ದಾರೆ.


ಆಶಾ ಕಾರ್ಯಕರ್ತೆಯರ ಹೋರಾಟ ಹತ್ತನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್, ಆಶಾ ಕಾರ್ಯಕರ್ತೆಯರು ಸರ್ಕಾರದ ಮೇಲೆ ವಿಶ್ವಾಸವಿಡದಿದ್ದರೆ ನಾವು ಅವರ ಮೇಲೆ ಯಾಕೆ ವಿಶ್ವಾಸವಿಡಬೇಕು ಎಂದು ಪ್ರಶ್ನಿಸಿದ್ದರು. ಹತ್ತು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ರಾಜ್ಯದ ಆರೋಗ್ಯ ವ್ಯವಸ್ಥೆಗೆ ಯಾವುದೇ ತೊಂದರೆಯಾಗಿಲ್ಲ. ಹೆರಿಗೆ ಸೇರಿದಂತೆ ಆರೋಗ್ಯ ಸೇವೆಗಳು ನಡೆಯುತ್ತಿವೆ. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ವ್ಯವಸ್ಥೆ ನಡೆಯುತ್ತದೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಆಶಾಗಳು ಇಲ್ಲದಿದ್ದರೆ ವೈದ್ಯರು ಮತ್ತು ನರ್ಸ್‌ಗಳು ಇಲ್ಲವೇ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.


ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ, ನಮ್ಮನ್ನು ನಿರ್ಲಕ್ಷಿಸಿ ಸಚಿವರು ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.


ವೈದ್ಯರು ಕೆಲಸ ಮಾಡುತ್ತಿದ್ದಾರೆ, ನರ್ಸ್‌ಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾದರೆ ಆಶಾ ಕಾರ್ಯಕರ್ತೆಯರ ಕೆಲಸವನ್ನು ಯಾರು ಮಾಡುತ್ತಿದ್ದಾರೆ? ಕಳೆದ ಹತ್ತು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿ ಸಂಗ್ರಹಿಸಲಿ. ಹಳ್ಳಿಗಳಲ್ಲಿ ಮನೆಗಳಲ್ಲಿಯೇ ಗರ್ಭಿಣಿಯರ ಹೆರಿಗೆ ನಡೆಯುತ್ತಿದ್ದು, ಹೆರಿಗೆ ಸಂದರ್ಭದ ಸಾವುಗಳೂ ಸಂಭವಿಸುತ್ತಿವೆ. ಈ ಅವಧಿಯಲ್ಲಿ ನಡೆದಿರುವ ಸಾವುಗಳ ಕುರಿತು ಶೀಘ್ರದಲ್ಲೇ ವರದಿ ನೀಡುತ್ತೇವೆ ಎಂದು ಎಚ್ಚರಿಸಿದರು.


ಸರ್ಕಾರದ ಮೇಲೆ ನಮಗೆ ಅಪಾರ ವಿಶ್ವಾಸವಿದೆ ಮತ್ತು ಇತ್ತು. ಪ್ರತಿಭಟನೆ ಆರಂಭಿಸುವ ೨೦ ದಿನಗಳ ಮುಂಚೆಯೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೆವು. ಆದರೂ ನಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಿಲ್ಲ. ಈಗ ಸಚಿವರ ಹೇಳಿಕೆ ಪ್ರತಿಭಟನೆಯನ್ನು ಕುಗ್ಗಿಸುವ ಪ್ರಯತ್ನವಾಗಿದೆ. ಇಂತಹ ಬೆದರಿಕೆಗಳಿಗೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದು ನಾಗಲಕ್ಷ್ಮೀ ಸ್ಪಷ್ಟಪಡಿಸಿದರು.


ಒಂದೆಡೆ ಸಚಿವರ ಹೇಳಿಕೆಯಿಂದ ಆಶಾ ಕಾರ್ಯಕರ್ತೆಯರ ಆಕ್ರೋಶ ಹೆಚ್ಚಾಗಿದ್ದರೆ, ಮತ್ತೊಂದೆಡೆ ಗೌರವಧನ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.