
ಬೆಂಗಳೂರು, ನ. ೧೫- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವತಿಯಿಂದ ೩೧೯ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಭರ್ತಿಗಾಗಿ ಇಂದು ಬಿಗಿ ಭದ್ರತೆ ನಡುವೆ ಇಂದು ಸುಸೂತ್ರವಾಗಿ ನಡೆಯಿತು.
ಪರೀಕ್ಷಾ ಕೇಂದ್ರಗಳ ಗೇಟ್ ಬಂದ್ ಮಾಡಲಾಗಿದ್ದು, ಬೆಳಗ್ಗೆ ೧೦ ಗಂಟೆಯಿಂದ ಮೊದಲ ಪತ್ರಿಕೆ ಆರಂಭವಾಗಿದೆ. ಮೊದಲ ಪತ್ರಿಕೆ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧೨ರ ವರೆಗೆ ನಡೆಯಿತು, ೨ನೇ ಪತ್ರಿಕೆ ಮಧ್ಯಾಹ್ನ ೨ ರಿಂದ ಸಂಜೆ ೪ರ ವರೆಗೆ ನಡೆಯಿತು.
ರಾಜ್ಯಾದ್ಯಂತ ಪೂರ್ವಭಾವಿ ಪರೀಕ್ಷೆಗೆ ಒಟ್ಟು ೧,೪೭,೦೬೭ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಪರೀಕ್ಷಾ ಅಕ್ರಮ ತಡೆಯಲು ಈ ಬಾರಿ ಅಭೂತಪೂರ್ವ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದ ಆಡಳಿತ ಸೇವೆಯಲ್ಲಿ ಅಧಿಕಾರಿಗಳಾಗುವ ಕನಸು ಹೊತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇಂದಿನ ಪರೀಕ್ಷೆ ಮಹತ್ವದ್ದಾಗಿದೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ವಿಭಾಗದ ಒಟ್ಟು ೩೧೯ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು.
ರಾಜ್ಯದ ೧೫ ಜಿಲ್ಲೆಗಳಲ್ಲಿ ಒಟ್ಟು ೩೪೫ ಪರೀಕ್ಷಾ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರ, ಮೈಸೂರು, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆ ನಿರಾಂತಕವಾಗಿ ನಡೆಯಿತು.
ಪರೀಕ್ಷಾ ಅಕ್ರಮ ತಡೆಯಲು ಬಿಗಿ ಭದ್ರತೆ
ಇತ್ತೀಚಿನ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಈ ಬಾರಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಇನ್ನೊಂದು ಮಹತ್ವದ ಕ್ರಮವಾಗಿ ಪರೀಕ್ಷೆ ಮುಗಿದ ದಿನವೇ ಒಎಂಆರ್ ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಕೆಪಿಎಸ್ಸಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಒಂದೆಡೆ ೩೧೯ ಹುದ್ದೆಗಳಿಗೆ ೧.೪೭ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರೆ, ಮತ್ತೊಂದೆಡೆ ಪರೀಕ್ಷಾ ಪಾರದರ್ಶಕತೆ ಕಾಪಾಡಲು ಆಯೋಗ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮುಂದಿನ ಮುಖ್ಯ ಪರೀಕ್ಷೆಗೆ ಹಾಜರಾಗಲು ಅವಕಾಶ ಪಡೆಯಲಿದ್ದಾರೆ. ಹೀಗಾಗಿ ಇಂದಿನ ಪರೀಕ್ಷೆ ಕೆಎಎಸ್ ಅಧಿಕಾರಿಯಾಗುವ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಮೊದಲ ಮಹತ್ವದ ಮೆಟ್ಟಿಲಾಗಿದೆ.
ಅಭ್ಯರ್ಥಿಗಳ ಪರದಾಟ
ಇನ್ನೂ ಮಲ್ಲೇಶ್ವರಂ ಸರ್ಕಾರಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಫುಲ್ ಶರ್ಟ್ ಧರಿಸಿ ಬಂದ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ಸಿಬ್ಬಂದಿ ಅಭ್ಯರ್ಥಿಯೊಬ್ಬರನ್ನು ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸಿದ್ದು, ಬಳಿಕ ತಂದೆಯೊಂದಿಗೆ ಹೊರಗೆ ಬಂದು ಬಟ್ಟೆ ಬದಲಾಯಿಸಿಕೊಂಡು ಮತ್ತೆ ಪರೀಕ್ಷಾ ಕೇಂದ್ರ ಪ್ರವೇಶಿಸಿದರು.
ಮತ್ತೊಬ್ಬ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಶರ್ಟ್ ಕತ್ತರಿಸಲು ಒಪ್ಪದ ಹಿನ್ನೆಲೆ ಶರ್ಟ್ ಕತ್ತರಿಸದೇ ಬನಿಯನ್ನಲ್ಲೇ ಪರೀಕ್ಷೆ ಬರೆದರು. ಮಾರ್ಗಸೂಚಿ ಪಾಲಿಸದ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು.
ವ್ಯಾಪಕ ತಪಾಸಣೆ
ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಪ್ರತಿಯೊಬ್ಬ ಅಭ್ಯರ್ಥಿಯನ್ನೂ ಎರಡು ಹಂತಗಳಲ್ಲಿ ಪರಿಶೀಲಿಸಿ ಒಳಗೆ ಕಳುಹಿಸಲಾಯಿತು.
ಮಹಿಳಾ ಅಭ್ಯರ್ಥಿಗಳಿಗೆ ತಾಳಿ ಮತ್ತು ಕಾಲುಂಗುರ ಧರಿಸಲು ಮಾತ್ರ ಅವಕಾಶ ನೀಡಲಾಗಿದೆ. ಕಿವಿ, ಕನ್ನಡಕ, ಶರ್ಟ್ ಕಾಲರ್, ಚಪ್ಪಲಿ ಹಾಗೂ ವಾಚ್ಗಳನ್ನೂ ಪರಿಶೀಲಿಸಲಾಗುತ್ತಿದ್ದು, ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಗೆ ಅವಕಾಶ ನೀಡಲಾಗಿಲ್ಲ.
























