
ನವದೆಹಲಿ: ನ. ೧೫-ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದರೂ, ಈ ಹಿಂದೆ ಮತದಾರರಾಗಿ ನೋಂದಾಯಿಸಿ ಕೊಂಡಿದ್ದ ಅರ್ಹ ನಾಗರಿಕರಿಗೆ ಚುನಾವಣಾ ಆಯೋಗ ಸಿಹಿಸುದ್ದಿ ನೀಡಿದೆ. ಮತದಾರರ ಪಟ್ಟಿಯಲ್ಲಿ ಮತ್ತೆ ಹೆಸರು ಸೇರ್ಪಡೆಗೊಳಿಸಲು ಫಾರ್ಮ್-೬ ಸಲ್ಲಿಸಿದರೆ ಯಾವುದೇ ಕಾನೂನು ಕ್ರಮ ಅಥವಾ ಪ್ರಾಸಿಕ್ಯೂಷನ್ ಎದುರಿಸ ಬೇಕಾಗಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಈ ಕುರಿತು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಆಯೋಗ ತನ್ನ ನಿಲುವನ್ನು ತಿಳಿಸಿದೆ.
ಈ ಸ್ಪಷ್ಟನೆಯನ್ನು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಸ್ಥಳೀಯ ಭಾಷೆಗಳಲ್ಲಿಯೂ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಗೂ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಕೆಲವರ ಹೆಸರು ಕರಡು ಪಟ್ಟಿಯಲ್ಲಿ ಇಲ್ಲದ ಕಾರಣ ಆತಂಕ ಉಂಟಾಗಿತ್ತು. ಇಂತಹವರು ಮತ್ತೆ ಹೆಸರು ಸೇರ್ಪಡೆಗಾಗಿ ಫಾರ್ಮ್-೬ ಸಲ್ಲಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆ-೧೯೫೦ರ ಸೆಕ್ಷನ್ ೩೧ರ ಅಡಿಯಲ್ಲಿ ಶಿಕ್ಷಾರ್ಹ ಕ್ರಮ ಎದುರಿಸಬೇಕಾಗ ಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.
ಈ ಆತಂಕವನ್ನು ನಿವಾರಿಸಿರುವ ಚುನಾವಣಾ ಆಯೋಗ, ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಎಸ್ಐಆರ್ ಬಳಿಕ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದ ಕಾರಣಕ್ಕೆ ಮಾತ್ರ ಫಾರ್ಮ್-೬ ಸಲ್ಲಿಸುವ ಅರ್ಜಿದಾರರ ವಿರುದ್ಧ ಯಾವುದೇ ಪ್ರಾಸಿಕ್ಯೂಷನ್ ದಾಖಲಿಸುವುದಿಲ್ಲ ಎಂದು ಹೇಳಿದೆ.
ಎಲ್ಲ ಮತದಾರರಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯಗಳ ಮುಖ್ಯ ಚುನಾವಣಾವಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಿಶೇಷವಾಗಿ ಸ್ಥಳೀಯ ಭಾಷೆಗಳಲ್ಲಿ ಈ ಮಾಹಿತಿಯನ್ನು ಪ್ರಚಾರ ಮಾಡುವಂತೆ ಆಯೋಗ ತಿಳಿಸಿದೆ. ಇದರಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮತದಾರರಿಗೆ ತಮ್ಮ ಹಕ್ಕು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಅರಿವು ಮೂಡಲಿದೆ.
ಯಾವುದೇ ಅರ್ಹ ಮತದಾರರು ಅಂತಿಮ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ವಿಶೇಷ ವ್ಯವಸ್ಥೆ ರೂಪಿಸಲು ಆಯೋಗ ಸೂಚಿಸಿದೆ.
ಅದೇ ಸಮಯದಲ್ಲಿ ಒಂದೇ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ನೋಂದಣಿಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದೆ.
ಮತದಾರರ ಪಟ್ಟಿಯ ಶುದ್ಧತೆ ಕಾಪಾಡುವುದು ಚುನಾವಣಾ ಆಯೋಗದ ಸಾಂವಿಧಾನಿಕ ಜವಾಬ್ದಾರಿಯಾಗಿದೆ.
ಅರ್ಹರಿಗೆ ಮತದಾನದ ಹಕ್ಕು ದೊರೆಯುವಂತೆ ಮಾಡುವುದರ ಜೊತೆಗೆ, ಪಟ್ಟಿಯಲ್ಲಿರುವ ಅಕ್ರಮ ಮತ್ತು ದೋಷಗಳನ್ನು ಸರಿಪಡಿಸುವುದಕ್ಕೂ ಆದ್ಯತೆ ನೀಡಲಾಗುವುದು ಎಂದು ಆಯೋಗ ಅಫಿಡವಿಟ್ನಲ್ಲಿ ಹೇಳಿದೆ.
ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆ ಕಾನೂನುಬದ್ಧವಾಗಿದೆ. ಆಯೋಗದ ಮೂವರು ಸದಸ್ಯರೂ ಒಮ್ಮತದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥಿಸಿಕೊಂಡಿತ್ತು.
ಮತದಾರರ ನೋಂದಣಿಗೆ ಬಳಸುವ ಕಾನೂನುಬದ್ಧ ಫಾರ್ಮ್-೬ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದೂ ಸ್ಪಷ್ಟಪಡಿಸಿತ್ತು.
ಇದೀಗ ಫಾರ್ಮ್-೬ ಸಲ್ಲಿಸುವ ಅರ್ಹ ಮತದಾರರಿಗೆ ಪ್ರಾಸಿಕ್ಯೂಷನ್ ಭಯವಿಲ್ಲ ಎಂದು ಆಯೋಗ ನೀಡಿರುವ ಸ್ಪಷ್ಟನೆ ಎಸ್ಐಆರ್ ಪ್ರಕ್ರಿಯೆಯಿಂದ ಹೆಸರು ಬಿಟ್ಟಿರುವ ಮತದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
























