Home ಜಿಲ್ಲೆ ಸ್ವಾವಲಂಬಿ ಜೀವನಕ್ಕೆ ಸರ್ಕಾರದ ಯೋಜನೆಗಳು ದಾರಿ: ಬಕ್ಕಪ್ಪ ದಂಡಿನ

ಸ್ವಾವಲಂಬಿ ಜೀವನಕ್ಕೆ ಸರ್ಕಾರದ ಯೋಜನೆಗಳು ದಾರಿ: ಬಕ್ಕಪ್ಪ ದಂಡಿನ

ಬೀದರ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿವೆ ಎಂದು ಜಾನಪದ ಕಲಾವಿದ ಬಕ್ಕಪ್ಪ ದಂಡಿನ ಹೇಳಿದರು.
ಬೀದರ ಜಿಲ್ಲೆಯ ಕಮಲನಗರ ತಾಲ್ಲೂಕಿನ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳತ (ಬಿ), ತಪಸಿಯಾಳ, ಚಿಮ್ಮಗಾಂವ, ದೊಣ್ಣವಾಡಿ, ಮುದೋಳ (ಬಿ), ನಿಂಗದಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೀದರ್ ಹಾಗೂ ವಿಶ್ವ ಕನ್ನಡಿಗರ ಸಂಸ್ಥೆ, ನೌಬಾದ್-ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಗ್ರಾಮ ಸಂಪರ್ಕ ಯೋಜನೆಯಡಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಹಾಗೂ ಭಾರತ್ ಜೋಡೋ ಜನಪದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವೆಂಬರ್ 11, 12 ಮತ್ತು 13ರಂದು ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಬಕ್ಕಪ್ಪ ದಂಡಿನ, ಯಲ್ಲಾಲಿಂಗ, ಸುವರ್ಣ ಹಾಗೂ ಗ್ಯಾರಂಟಿ ರಾಮಣ್ಣ ಅವರು ಜನಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ಆರ್ಥಿಕ ನೆರವು ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಜನಪದ ಗೀತೆಗಳ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪರ ಪುಸ್ತಕಗಳನ್ನು ಗ್ರಾಮಸ್ಥರಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಜುಬೇರ್ ಪಾಷಾ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.