Home ಮುಖಪುಟ ಸುದ್ದಿ ಪಿಂಕ್ ಲೈನ್ ಮೆಟ್ರೋ ಮೊದಲ ದಿನ ೩೩,೪೦೯ ಮಂದಿ ಪ್ರಯಾಣ

ಪಿಂಕ್ ಲೈನ್ ಮೆಟ್ರೋ ಮೊದಲ ದಿನ ೩೩,೪೦೯ ಮಂದಿ ಪ್ರಯಾಣ

ಬೆಂಗಳೂರು,ನ.೧೫-ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೊದಲ ಹಂತದ ವಾಣಿಜ್ಯ ಸಂಚಾರಕ್ಕೆ ಮೊದಲ ದಿನವೇ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ನಿನ್ನೆ ರಾತ್ರಿ ೮ ಗಂಟೆಯವರೆಗೆ ಆರು ನಿಲ್ದಾಣಗಳಲ್ಲಿ ಒಟ್ಟು ೩೩,೪೦೯ ಬೋರ್ಡಿಂಗ್ ದಾಖಲಾಗಿದ್ದು, ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವೊಂದರಲ್ಲೇ ಅತಿ ಹೆಚ್ಚು ಅಂದರೆ ೧೮,೭೧೪ ಮಂದಿ ಪ್ರಯಾಣಿಸಿದ್ದಾರೆ.


ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಜಯದೇವ ಆಸ್ಪತ್ರೆ ನಿಲ್ದಾಣದ ಪಿಂಕ್ ಲೈನ್ ಪ್ಲಾಟ್‌ಫಾರ್ಮ್‌ನಿಂದಲೇ ೬,೭೦೩ ಮಂದಿ ರೈಲು ಹತ್ತಿದ್ದಾರೆ. ಇನ್ನು ಕಾಳೇನ ಅಗ್ರಹಾರ ನಿಲ್ದಾಣದಿಂದ ೪,೯೪೪, ಹುಳಿಮಾವು ನಿಲ್ದಾಣದಿಂದ ೩,೦೨೮, ಬಿಳೇಕಹಳ್ಳಿ-ಐಐಎಂಬಿ ನಿಲ್ದಾಣದಿಂದ ೨,೩೧೬, ಎನ್‌ಎಸ್ ಪಾಳ್ಯ-ಜೆ.ಪಿ.ನಗರ ೪ನೇ ಹಂತದಿಂದ ೧,೬೪೦ ಹಾಗೂ ಸುದ್ದಗುಂಟೆ ಪಾಳ್ಯ ನಿಲ್ದಾಣದಿಂದ ೨,೭೬೭ ಮಂದಿ ಪ್ರಯಾಣಿಸಿದ್ದಾರೆ.


ಕಾಳೇನ ಅಗ್ರಹಾರದಿಂದ ಎಸ್.ಜಿ.ಪಾಳ್ಯವರೆಗಿನ ೭.೫ ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗದಲ್ಲಿ ಮೊದಲ ಹಂತದ ಮೆಟ್ರೋ ಸಂಚಾರ ಆರಂಭವಾಗಿದೆ.


ಸಮಯ ಬದಲಾವಣೆ:


ಬಿಎಂಆರ್‌ಸಿಎಲ್ ಪ್ರಕಟಿಸಿರುವ ವೇಳಾಪಟ್ಟಿಯಂತೆ, ಪ್ರತಿ ಸೋಮವಾರ ಕಾಳೇನ ಅಗ್ರಹಾರದಿಂದ ಬೆಳಗ್ಗೆ ೪.೫೫ಕ್ಕೆ ಮೊದಲ ರೈಲು ಹೊರಡಲಿದ್ದು, ಎಸ್.ಜಿ.ಪಾಳ್ಯದಿಂದ ಬೆಳಗ್ಗೆ ೫ ಗಂಟೆಗೆ ಸಂಚಾರ ಆರಂಭಿಸಲಿದೆ. ಮಂಗಳವಾರದಿಂದ ಶನಿವಾರದವರೆಗೆ ಎರಡೂ ನಿಲ್ದಾಣಗಳಿಂದ ಬೆಳಗ್ಗೆ ೬ ಗಂಟೆಗೆ ಮೊದಲ ರೈಲು ಹೊರಡಲಿದೆ. ಭಾನುವಾರ ಬೆಳಗ್ಗೆ ೭ ಗಂಟೆಯಿಂದ ರೈಲು ಸೇವೆ ಲಭ್ಯವಿರಲಿದೆ.
ಪ್ರತಿದಿನ ರಾತ್ರಿ ಕೊನೆಯ ರೈಲು ಕಾಳೇನ ಅಗ್ರಹಾರದಿಂದ ೧೦.೫೦ಕ್ಕೆ ಹಾಗೂ ಎಸ್.ಜಿ.ಪಾಳ್ಯದಿಂದ ೧೦.೫೪ಕ್ಕೆ ಹೊರಡಲಿದೆ.


೮ ನಿಮಿಷಕ್ಕೊಂದು ರೈಲು:


ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಸಂಚಾರದ ಆವರ್ತನವನ್ನೂ ನಿಗಮ ಪ್ರಕಟಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪೀಕ್ ಅವರ್‌ನಲ್ಲಿ ಪ್ರತಿ ೮ ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಉಳಿದ ಸಮಯದಲ್ಲಿ ೧೦ ನಿಮಿಷಕ್ಕೊಂದು ರೈಲು ಲಭ್ಯವಿರಲಿದೆ. ಶನಿವಾರ ಮತ್ತು ಭಾನುವಾರವೂ ಪ್ರತಿ ೧೦ ನಿಮಿಷಕ್ಕೊಂದು ರೈಲು ಸಂಚರಿಸಲಿದೆ.


ಪ್ರಯಾಣಿಕರ ದಟ್ಟಣೆ ಹಾಗೂ ಸಂಚಾರದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ರೈಲುಗಳ ಆವರ್ತನದಲ್ಲಿ ಬದಲಾವಣೆ ಮಾಡುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.


೨೧.೨೬ ಕಿಮೀ ಪಿಂಕ್ ಲೈನ್:


ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು ೨೧.೨೬ ಕಿ.ಮೀ. ಉದ್ದದ ಪಿಂಕ್ ಲೈನ್ ಯೋಜನೆ ರೂಪಿಸಲಾಗಿದೆ. ಇದರಲ್ಲಿ ೭.೫ ಕಿ.ಮೀ. ಎತ್ತರಿಸಿದ ಮಾರ್ಗವಾಗಿದ್ದರೆ, ಉಳಿದ ೧೩.೭೬ ಕಿ.ಮೀ. ಭೂಗತ ಮಾರ್ಗವಾಗಿದೆ.
ಸಂಪೂರ್ಣ ಯೋಜನೆ ಕಾರ್ಯಾರಂಭಿಸಿದ ಬಳಿಕ ದಕ್ಷಿಣ ಬೆಂಗಳೂರಿನಿಂದ ಉತ್ತರ ಬೆಂಗಳೂರಿನವರೆಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಗಮವಾಗಲಿದ್ದು, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗುವ ನಿರೀಕ್ಷೆಯಿದೆ.

ಬ್ಲೂ ಲೈನ್ ೨೦೨೮ಕ್ಕೆ ಪೂರ್ಣ

ನಮ್ಮ ಮೆಟ್ರೋ ೨ನೇ ಹಂತದ ವಿಸ್ತರಣೆಗೆ ವೇಗ ಸಿಕ್ಕಿದ್ದು, ಪಿಂಕ್ ಲೈನ್‌ನ ಉಳಿದ ಸುರಂಗ ಮಾರ್ಗ ೨೦೨೭ರ ಮಧ್ಯಭಾಗದ ವೇಳೆಗೆ ಹಾಗೂ ಬ್ಲೂ ಲೈನ್‌ನ ೨ಎ ಮತ್ತು ೨ಬಿ ಹಂತಗಳು ೨೦೨೮ರ ಮಧ್ಯಭಾಗದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.


ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಬೆಂಗಳೂರು ಮೆಟ್ರೋ ಯೋಜನೆಗೆ ?೩,೦೬೭ ಕೋಟಿ (೫೨,೦೩೬ ಮಿಲಿಯನ್ ಯೆನ್) ಸಾಲದ ನೆರವು ನೀಡಿದೆ. ಈ ಹಣವನ್ನು ಸಿಗ್ನಲಿಂಗ್ ವ್ಯವಸ್ಥೆ, ರೈಲು ಬೋಗಿಗಳ ಖರೀದಿ ಹಾಗೂ ಸಲಹಾ ಸೇವೆಗಳಿಗೆ ಬಳಸಲಾಗುತ್ತದೆ.


ಪಿಂಕ್ ಲೈನ್ ಪೂರ್ಣಗೊಂಡ ಬಳಿಕ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ೨೧.೨೬ ಕಿ.ಮೀ. ಉದ್ದದ ಸಂಪರ್ಕ ಕಲ್ಪಿಸಲಿದೆ. ಇದರಲ್ಲಿ ೭.೫ ಕಿ.ಮೀ. ಎತ್ತರಿಸಿದ ಮಾರ್ಗ ಹಾಗೂ ೧೩.೭೬ ಕಿ.ಮೀ. ಸುರಂಗ ಮಾರ್ಗ ಇರಲಿದ್ದು, ಒಟ್ಟು ೧೮ ನಿಲ್ದಾಣಗಳನ್ನು ಹೊಂದಿರಲಿದೆ.


ಇತ್ತೀಚೆಗೆ ಉದ್ಘಾಟನೆಗೊಂಡ ಮೊದಲ ಎತ್ತರಿಸಿದ ವಿಭಾಗವು ಆರು ನಿಲ್ದಾಣಗಳನ್ನು ಒಳಗೊಂಡಿದೆ. ಉಳಿದ ಸುರಂಗ ಮಾರ್ಗ ಕಾರ್ಯಾರಂಭಗೊಂಡ ಬಳಿಕ ನಗರದ ಪ್ರಮುಖ ಪ್ರದೇಶಗಳ ನಡುವಿನ ಸಂಪರ್ಕ ಸುಧಾರಿಸುವುದರ ಜತೆಗೆ ವಾಹನ ದಟ್ಟಣೆಯೂ ಕಡಿಮೆಯಾಗುವ ನಿರೀಕ್ಷೆಯಿದೆ.