
ಬೆಂಗಳೂರು, ನ.೧೩- ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋ ಇತಿಹಾಸದಲ್ಲಿ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು. ನಗರದ ಸಂಚಾರ ವ್ಯವಸ್ಥೆಗೆ ಹೊಸ ವೇಗ ನೀಡಲಿರುವ ನಮ್ಮ ಮೆಟ್ರೋದ ಪಿಂಕ್ ಲೈನ್ನ ೭.೫ ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದರು. ಇದರೊಂದಿಗೆ ಬೆಂಗಳೂರಿನ ಮೆಟ್ರೋ ಜಾಲವು ೯೬.೧ ಕಿ.ಮೀ.ಯಿಂದ ೧೦೩.೬ ಕಿ.ಮೀ.ಗೆ ವಿಸ್ತರಣೆಯಾಗಲಿದ್ದು, ನೂರು ಕಿಲೋಮೀಟರ್ ಗಡಿ ದಾಟಲಿದೆ.
೨೦೧೧ರ ಅಕ್ಟೋಬರ್ ೨೦ರಂದು ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆಯ ನಡುವೆ ಕೇವಲ ೬.೭ ಕಿ.ಮೀ. ಉದ್ದದ ಮಾರ್ಗದೊಂದಿಗೆ ಆರಂಭಗೊಂಡಿದ್ದ ನಮ್ಮ ಮೆಟ್ರೋ, ೧೫ ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ವಿಸ್ತರಣೆಗೊಂಡಿದೆ. ಇದೀಗ ಪಿಂಕ್ ಲೈನ್ನ ಮೊದಲ ಹಂತದ ಕಾರ್ಯಾಚರಣೆ ಆರಂಭವಾಗುವುದರೊಂದಿಗೆ ದೇಶದ ಪ್ರಮುಖ ಮೆಟ್ರೋ ಜಾಲಗಳ ಸಾಲಿನಲ್ಲಿ ಬೆಂಗಳೂರು ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರು ನಿಲ್ದಾಣಗಳಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿ, ಬಳಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಐಐಎಂಬಿ- ಬಿಳೇಕಹಳ್ಳಿ ನಿಲ್ದಾಣದವರೆಗೆ ತೆರಳಿದರು.
ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯದವರೆಗೆ ಸುಮಾರು ೭.೫ ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಆರು ನಿಲ್ದಾಣಗಳಿವೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ-ಬಿಳೇಕಹಳ್ಳಿ, ಎನ್.ಎಸ್. ಪಾಳ್ಯ?ಜೆ.ಪಿ. ನಗರ ನಾಲ್ಕನೇ ಹಂತ, ಜಯದೇವ ಆಸ್ಪತ್ರೆ ಹಾಗೂ ಎಸ್.ಜಿ. ಪಾಳ್ಯ ನಿಲ್ದಾಣಗಳು ಪ್ರಯಾಣಿಕರ ಸೇವೆಗೆ ಸಜ್ಜಾಗಿವೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳನ್ನು ಬಣ್ಣಬಣ್ಣದ ಹೂವುಗಳು ಹಾಗೂ ಪಿಂಕ್, ಯೆಲ್ಲೋ ಬಣ್ಣದ ಅಲಂಕಾರಗಳಿಂದ ಸಿಂಗರಿಸಲಾಗಿದೆ. ರಸ್ತೆ ಮತ್ತು ಫುಟ್ಪಾತ್ಗಳ ಸ್ವಚ್ಛತೆ, ಡಾಂಬರೀಕರಣ ಸೇರಿದಂತೆ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಬಿಗಿ ಪೊಲೀಸ್ ಭದ್ರತೆ:
ಎಸ್.ಜಿ. ಪಾಳ್ಯ ನಿಲ್ದಾಣದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ.
ನಾಳೆಯಿಂದ ಸಾರ್ವಜನಿಕರಿಗೆ ಮುಕ್ತ;
ಇಂದು ಲೋಕಾರ್ಪಣೆಯಾಗಿರೋ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗದಲ್ಲಿ ನಾಳೆ ಬೆಳಿಗ್ಗೆ ೬ ಗಂಟೆಯಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಬಿಇಎಂಎಲ್ನಿಂದ ಬಂದಿರುವ ಐದು ಮೆಟ್ರೋ ರೈಲುಗಳು ಸಂಚರಿಸಲಿದ್ದು, ಸುಮಾರು ಎಂಟು ನಿಮಿಷಗಳಿಗೊಮ್ಮೆ ರೈಲು ಸೇವೆ ಒದಗಿಸಲು ಯೋಜಿಸಲಾಗಿದೆ.
ಪಿಂಕ್ ಲೈನ್ನ ಸಂಪೂರ್ಣ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ೨೧.೨೬ ಕಿ.ಮೀ. ಉದ್ದವಿದೆ. ಇದರಲ್ಲಿ ೭.೫ ಕಿ.ಮೀ. ಎಲಿವೇಟೆಡ್ ಮಾರ್ಗವಾಗಿದ್ದರೆ, ೧೩.೭೬ ಕಿ.ಮೀ. ಸುರಂಗ ಮಾರ್ಗವಾಗಿದೆ. ಒಟ್ಟು ೧೮ ನಿಲ್ದಾಣಗಳ ಪೈಕಿ ಆರು ಎಲಿವೇಟೆಡ್ ಮತ್ತು ೧೨ ಭೂಗತ ನಿಲ್ದಾಣಗಳಿವೆ. ಉಳಿದ ಸುರಂಗ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಸಂಪೂರ್ಣ ಪಿಂಕ್ ಲೈನ್ ಕಾರ್ಯಾಚರಣೆಗೆ ಮುಕ್ತವಾಗಲಿದೆ.
ಪ್ರಯಾಣ ದರ ಎಷ್ಟು?
ಬಿಎಂಆರ್ಸಿಎಲ್ ಪಿಂಕ್ ಲೈನ್ನ ವಿವಿಧ ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನು ನಿಗದಿಪಡಿಸಿದೆ.
ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರಕ್ಕೆ -೩೦
ಎಸ್.ಜಿ. ಪಾಳ್ಯದಿಂದ ಹುಳಿಮಾವಿಗೆ -೨೦
ಎಸ್.ಜಿ. ಪಾಳ್ಯದಿಂದ ಐಐಎಂಬಿ, ಬಿಳೇಕಹಳ್ಳಿಗೆ -೨೦
ಎಸ್.ಜಿ. ಪಾಳ್ಯದಿಂದ ಎನ್.ಎಸ್. ಪಾಳ್ಯ, ಜೆ.ಪಿ. ನಗರ ನಾಲ್ಕನೇ ಹಂತಕ್ಕೆ -೧೦
ಹೊಸ ಮಾರ್ಗ ಆರಂಭದಿಂದ ಬನ್ನೇರುಘಟ್ಟ ರಸ್ತೆ ಹಾಗೂ ದಕ್ಷಿಣ ಬೆಂಗಳೂರಿನ ಹಲವು ಪ್ರದೇಶಗಳ ಪ್ರಯಾಣಿಕರಿಗೆ ಮೆಟ್ರೋ ಸಂಪರ್ಕ ಸುಲಭವಾಗಲಿದೆ. ಪ್ರಮುಖ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಮತ್ತು ವಸತಿ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕ ಬಲಗೊಳ್ಳಲಿದೆ ಎಂಬ ನಿರೀಕ್ಷೆಯಿದೆ.
ದೆಹಲಿ ಬಳಿಕ ಎರಡನೇ ಸ್ಥಾನ:
ಪಿಂಕ್ ಲೈನ್ನ ಹೊಸ ಮಾರ್ಗ ಸೇರ್ಪಡೆಯೊಂದಿಗೆ ಬೆಂಗಳೂರು ಮೆಟ್ರೋ ಜಾಲವು ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಎಂಬ ಸ್ಥಾನಕ್ಕೆ ಏರಲಿದೆ ಎಂಬುದು ಈ ಯೋಜನೆಯ ಮತ್ತೊಂದು ವಿಶೇಷ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ದೆಹಲಿ ಮೆಟ್ರೋ ಜಾಲವು ಸುಮಾರು ೩೭೪.೫ ಕಿ.ಮೀ. ವಿಸ್ತಾರ ಹೊಂದಿದ್ದು, ಬೆಂಗಳೂರು ೧೦೩.೬ ಕಿ.ಮೀ. ಜಾಲದೊಂದಿಗೆ ಮುಂಚೂಣಿಯಲ್ಲಿರುವ ನಗರಗಳ ಸಾಲಿನಲ್ಲಿ ಸ್ಥಾನ ಪಡೆಯಲಿದೆ. ಮುಂಬೈ ಮೆಟ್ರೋ ಜಾಲದ ಒಟ್ಟು ಉದ್ದವನ್ನು ಹೋಲಿಸುವಾಗ ಮುಂಬೈ ಮತ್ತು ನವಿ ಮುಂಬೈ ಜಾಲಗಳನ್ನು ಹೇಗೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂಬುದರ ಆಧಾರದಲ್ಲಿ ಶ್ರೇಯಾಂಕ ಬದಲಾಗಬಹುದು.
ಪ್ರಸ್ತುತ ನಮ್ಮ ಮೆಟ್ರೋದಲ್ಲಿ ನೇರಳೆ ಮಾರ್ಗವು ವೈಟ್ಫೀಲ್ಡ್ನಿಂದ ಚಲ್ಲಘಟ್ಟದವರೆಗೆ ಸುಮಾರು ೪೩.೪೯ ಕಿ.ಮೀ., ಹಸಿರು ಮಾರ್ಗವು ಮದಾವರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ ಸುಮಾರು ೩೩.೪೬ ಕಿ.ಮೀ. ಹಾಗೂ ಹಳದಿ ಮಾರ್ಗವು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸುಮಾರು ೧೯.೧೫ ಕಿ.ಮೀ. ವಿಸ್ತರಿಸಿದೆ. ಇದೀಗ ಪಿಂಕ್ ಲೈನ್ನ ಮೊದಲ ಹಂತವೂ ಸೇರ್ಪಡೆಯಾಗುತ್ತಿದೆ.
೩,೪೭೦ ಕೋಟಿ ವೆಚ್ಚದ ಯೋಜನೆ
ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯದವರೆಗಿನ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗದ ನಿರ್ಮಾಣಕ್ಕೆ ಸುಮಾರು ೩,೪೭೦ ಕೋಟಿ ವೆಚ್ಚವಾಗಿದೆ. ಸಂಪೂರ್ಣ ಪಿಂಕ್ ಲೈನ್ ಕಾರ್ಯಾರಂಭಗೊಂಡ ಬಳಿಕ ದಕ್ಷಿಣ ಬೆಂಗಳೂರನ್ನು ಉತ್ತರ ಬೆಂಗಳೂರಿನ ನಾಗವಾರದೊಂದಿಗೆ ಸಂಪರ್ಕಿಸುವ ಮಹತ್ವದ ಸಾರಿಗೆ ಮಾರ್ಗ ಸಿದ್ಧವಾಗಲಿದೆ.
ವಂದೇ ಭಾರತ್ ರೈಲಿಗೂ ಹಸಿರು ನಿಶಾನೆ:
ಮೆಟ್ರೋ ಮಾರ್ಗದ ಉದ್ಘಾಟನೆಯ ಜೊತೆಗೆ ಬೆಂಗಳೂರು?ಗೋವಾ ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿದ್ದಾರು.ಯಶವಂತಪುರದಿಂದ ಗೋವಾದ ಮಡಗಾಂವ್ವರೆಗೆ ಸಂಚರಿಸುವ ಈ ರೈಲು ಬೆಂಗಳೂರು, ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲಿದೆ.
ಸುಮಾರು ೬೭೦ ಕಿ.ಮೀ. ದೂರವನ್ನು ಕ್ರಮಿಸುವ ರೈಲಿನಲ್ಲಿ ೧೬ ಬೋಗಿಗಳಿದ್ದು, ಸುಮಾರು ೧,೧೨೮ ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ನವೆಂಬರ್ ೧೫ರಿಂದ ನಿಯಮಿತ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯದ ನಡುವೆ ಸಾಗುವ ಈ ರೈಲು ಕರಾವಳಿ ಕರ್ನಾಟಕ ಮತ್ತು ಗೋವಾ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ಸಾಧ್ಯತೆಯಿದೆ.
ಮೆಟ್ರೋ ವಿಸ್ತರಣೆ ಹಾಗೂ ಹೊಸ ವಂದೇ ಭಾರತ್ ರೈಲಿನ ಆರಂಭದೊಂದಿಗೆ ಬೆಂಗಳೂರಿನ ನಗರ ಸಾರಿಗೆ ಮತ್ತು ರಾಜ್ಯದ ರೈಲು ಸಂಪರ್ಕ ವ್ಯವಸ್ಥೆಗೆ ಹೊಸ ಅಧ್ಯಾಯ ಆರಂಭವಾಗಲಿದೆ. ದೀರ್ಘಕಾಲದ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿಗೆ ಸಾರ್ವಜನಿಕ ಸಾರಿಗೆಯ ಬಳಕೆ ಹೆಚ್ಚಿಸುವಲ್ಲಿ ಪಿಂಕ್ ಲೈನ್ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
ಮೋದಿ ಸಂಚರಿಸುವ ಮೆಟ್ರೋ ಕೋಚ್ನಲ್ಲಿ ನಾಲ್ವರು ಗಣ್ಯರಿಗೆ ಮಾತ್ರ ಅವಕಾಶ:
ಆರು ಕೋಚ್ಗಳ ರೈಲಿನಲ್ಲಿ ಗಣ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತ್ಯೇಕ ವ್ಯವಸ್ಥೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಪಿಂಕ್ ಲೈನ್ ಮೆಟ್ರೋ ಮಾರ್ಗದ ಉದ್ಘಾಟನೆ ಹಿನ್ನೆಲೆಯಲ್ಲಿ, ಅವರು ಸಂಚರಿಸಲಿರುವ ನಮ್ಮ ಮೆಟ್ರೋ ರೈಲಿನಲ್ಲಿ ಭದ್ರತೆ ಹಾಗೂ ಶಿಷ್ಟಾಚಾರದ ದೃಷ್ಟಿಯಿಂದ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿಯವರೊಂದಿಗೆ ಸಂಚರಿಸುವ ಕೋಚ್ನಲ್ಲಿ ನಾಲ್ವರು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ರಾಜ್ಯಪಾಲೆ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೆಟ್ರೋದಲ್ಲಿ ಸಂಚರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಆರು ಕೋಚ್ಗಳನ್ನು ಹೊಂದಿರುವ ಮೆಟ್ರೋ ರೈಲಿನಲ್ಲಿ ಪ್ರಧಾನಿ ಹಾಗೂ ಗಣ್ಯರ ಸಂಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಉಳಿದ ಕೋಚ್ಗಳಲ್ಲಿ ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು, ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಸಂಸದರು, ಶಾಸಕರು ಹಾಗೂ ಇತರ ಗಣ್ಯರಿಗೆ ಅವಕಾಶ ಕಲ್ಪಿಸಲಾಗಿದೆ.
ಯಾವ ಕೋಚ್ನಲ್ಲಿ ಯಾರಿಗೆ ಅವಕಾಶ?
ಕೋಚ್ ೧: ಬಿಎಂಆರ್ಸಿಎಲ್ ತುರ್ತು ಸೇವಾ ಸಿಬ್ಬಂದಿ.
ಕೋಚ್ ೨: ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು.
ಕೋಚ್ ೩: ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರು.
ಕೋಚ್ ೪: ಸಚಿವರು ಹಾಗೂ ಸ್ಥಳೀಯ ಶಾಸಕರು.
ಕೋಚ್ ೫: ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಗಳು.
ಕೋಚ್ ೬: ಬಿಎಂಆರ್ಸಿಎಲ್ ಸಿಬ್ಬಂದಿ.
ಈ ಮೂಲಕ ಮೆಟ್ರೋ ರೈಲಿನಲ್ಲಿನ ಆಸನ ಹಾಗೂ ಸಂಚಾರ ವ್ಯವಸ್ಥೆಯನ್ನು ಗಣ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ.
ಮೋದಿಗೆ ಕೆಂಪೇಗೌಡರ ಪ್ರತಿಮೆ ಉಡುಗೊರೆ:
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಉಡುಗೊರೆ ನೀಡಿದರು. ನಾಡಪ್ರಭು ಕೆಂಪೇಗೌಡರ ವಿಗ್ರಹವನ್ನು ಪ್ರಧಾನಿಯವರಿಗೆ ಬೆಂಗಳೂರಿನ ಐಐಎಂಬಿ (IIಒಃ) ಕ್ಯಾಂಪಸ್ನಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿಯವರಿಗೆ ನೀಡಿದರು.
























