
ಬೆಂಗಳೂರು,ನ.೧೪- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಕೀಯ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಸುಮಾರು ೧,೫೦೦ ಪುಟಗಳ ಚಾರ್ಜ್ಶೀಟ್ನಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಾದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಕಿಂಗ್ಪಿನ್ ಬಸವರಾಜ್ ಕನ್ನಾಳೆ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಇಡಿ ಉಲ್ಲೇಖಿಸಿದೆ.
ದೋಷಾರೋಪ ಪಟ್ಟಿಯ ಪ್ರಕಾರ, ಜನವರಿ ೮ ಮತ್ತು ೯ರಂದು ಹಲವು ವಿಲ್ಲಾಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿತ್ತು. ಆರ್ಕಿಡ್ ನಿರ್ವಾಣ ಸೇರಿದಂತೆ ವಿವಿಧ ವಿಲ್ಲಾಗಳಲ್ಲಿ ಸುಮಾರು ೨೦ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಎಂದು ಇಡಿ ಉಲ್ಲೇಖಿಸಿದೆ.
ಜನವರಿ ೭ರಂದು ಎಚ್ಪಿ ಪೆನ್ಡ್ರೈವ್ ಮೂಲಕ ಗ್ಯಾನೇಂದ್ರ ಕುಮಾರ್ ಅವರು ಬಸವರಾಜ್ ಕನ್ನಾಳೆಗೆ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೀಡಿದ್ದರು ಎನ್ನಲಾಗಿದೆ. ಎರಡು ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ ೮೦ ಅಂಕಗಳ ಪ್ರಶ್ನೆಗಳನ್ನು ಪೆನ್ಡ್ರೈವ್ನಲ್ಲಿ ಹಾಕಿಕೊಡಲಾಗಿತ್ತು. ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನೇ ಗ್ಯಾನೇಂದ್ರ ಕುಮಾರ್ ಮತ್ತು ಕನ್ನಾಳೆ ನಕಲು ಮಾಡಿದ್ದರು ಎಂದು ಆರೋಪಿಸಲಾಗಿದೆ.
ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ನಲ್ಲಿ ಪ್ರಶ್ನೆಪತ್ರಿಕೆಯನ್ನು ನಕಲು ಮಾಡಲಾಗಿತ್ತು. ಬಳಿಕ ಸಾಕ್ಷ್ಯ ಸಿಗದಂತೆ ಮಾಡಲು ಅದೇ ದಿನ ಟ್ಯಾಬ್ಲೆಟ್ ಅನ್ನು ಒಡೆದು ಬಿಸಾಡಲಾಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
೮೦ ಲಕ್ಷಕ್ಕೆ ಬೇಡಿಕೆ ಒಪ್ಪಂದ
ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡುವುದಾಗಿ ಕನ್ನಾಳೆ ನಂಬಿಸಿದ್ದ ಎನ್ನಲಾಗಿದೆ. ಆರಂಭದಲ್ಲಿ ೮೦ ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆತ, ಬಳಿಕ ೪೦ ಲಕ್ಷ ರೂ.ಗೆ ಇಳಿಸಿದ್ದ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ ೧.೭೦ ಕೋಟಿ ರೂ. ಹಣವನ್ನು ಗ್ಯಾನೇಂದ್ರ ಕುಮಾರ್ ಅವರು ಕನ್ನಾಳೆಯಿಂದ ಪಡೆದುಕೊಂಡಿದ್ದರು ಎಂಬ ಆರೋಪವನ್ನೂ ಇ.ಡಿ. ಮಾಡಿದೆ.
೨೦೨೫ರಲ್ಲಿ ಗ್ಯಾನೇಂದ್ರ ಕುಮಾರ್ ಅವರು ತಮ್ಮ ಅತ್ತಿಗೆಗೆ ೧೫.೩೯ ಲಕ್ಷ ರೂ. ಹಣ ನೀಡಿದ್ದರು. ಅಲ್ಲದೆ, ಸಹೋದರನ ಬ್ಯಾಂಕ್ ಖಾತೆಗೆ ೧೦.೯೪ ಲಕ್ಷ ರೂ. ವರ್ಗಾವಣೆ ಮಾಡಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮದಿಂದ ಸಂಪಾದಿಸಿದ ಹಣವನ್ನು ಸ್ವಂತ ಆದಾಯವೆಂದು ಬಿಂಬಿಸಲು ಆರೋಪಿಗಳು ಹಲವು ಪ್ರಯತ್ನಗಳನ್ನು ನಡೆಸಿದ್ದರು ಎನ್ನಲಾಗಿದೆ. ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ. ತಿಳಿಸಿದೆ.
ಪ್ರಕರಣದಲ್ಲಿ ಇಬ್ಬರು ಪಶುವೈದ್ಯಾಧಿಕಾರಿ ಹುದ್ದೆಯ ಅಭ್ಯರ್ಥಿಗಳ ಹೆಸರನ್ನೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.೧:೩ ಅನುಪಾತದಲ್ಲಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿತ್ತು. ಕೆಪಿಎಸ್ಸಿಯ ಇತರ ಅಧಿಕಾರಿಗಳೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪವನ್ನು ಇ.ಡಿ. ಮಾಡಿದೆ.
ಇದಲ್ಲದೆ, ಅಕ್ರಮದಿಂದ ಬಂದ ಹಣವನ್ನು ಉಮೇಶ್ ಮತ್ತು ಓಂಕಾರ್ ಎಂಬವರಿಗೆ ವರ್ಗಾಯಿಸಲಾಗಿದೆ ಎಂಬ ಅಂಶವೂ ಚಾರ್ಜ್ಶೀಟ್ನಲ್ಲಿ ಪ್ರಸ್ತಾಪವಾಗಿದೆ.
ಒಟ್ಟಿನಲ್ಲಿ, ಪಶುವೈದ್ಯಕೀಯ ನೇಮಕಾತಿ ಹಗರಣದ ತನಿಖೆಯಲ್ಲಿ ಇ.ಡಿ. ಸಲ್ಲಿಸಿರುವ ಮೊದಲ ದೋಷಾರೋಪ ಪಟ್ಟಿ ಹಲವು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ್ದು, ಪ್ರಕರಣದ ಮುಂದಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆ ಕುತೂಹಲ ಮೂಡಿಸಿದೆ.
























