Home ಜಿಲ್ಲೆ ಅ. 11ರಂದು ಕೆ-ಸೆಟ್ ಪರೀಕ್ಷೆ: ಪಾರದರ್ಶಕವಾಗಿ ನಡೆಸಲು ಸೂಚನೆ

ಅ. 11ರಂದು ಕೆ-ಸೆಟ್ ಪರೀಕ್ಷೆ: ಪಾರದರ್ಶಕವಾಗಿ ನಡೆಸಲು ಸೂಚನೆ

ವಿಜಯಪುರ, ಅ. 9 : ಅ. 11ರಂದು ಜಿಲ್ಲೆಯಲ್ಲಿ ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೆ-ಸೆಟ್ ಪರೀಕ್ಷೆಯ ಸಿದ್ಧತೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 24 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 8,817 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ, ಮೂಲಸೌಲಭ್ಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ಸೂಚಿಸಿದರು.
ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 9 ಮಾರ್ಗಗಳನ್ನು ಗುರುತಿಸಲಾಗಿದೆ. ತ್ರಿಸದಸ್ಯ ಮಾರ್ಗಾಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದ್ದು, ಅವರು ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಖಜಾನೆಯಿಂದ ಪರೀಕ್ಷಾ ಸಾಮಗ್ರಿಗಳನ್ನು ಪಡೆದು ನಿಗದಿತ ಸಮಯಕ್ಕೆ ಕೇಂದ್ರಗಳಿಗೆ ತಲುಪಿಸಬೇಕು ಎಂದರು.
ಪರೀಕ್ಷೆಯ ಗೌಪ್ಯ ಸಾಮಗ್ರಿಗಳ ಸುರಕ್ಷಿತ ನಿರ್ವಹಣೆಗೆ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಉಪನಿರ್ದೇಶಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ಕೇಂದ್ರಕ್ಕೆ ವೀಕ್ಷಕರ ನೇಮಕ

ಪ್ರತಿ ಪರೀಕ್ಷಾ ಕೇಂದ್ರಕ್ಕೂ ಓರ್ವ ವೀಕ್ಷಕರನ್ನು ನೇಮಿಸಲಾಗಿದೆ. ಅವರು ಪರೀಕ್ಷೆ ಆರಂಭಕ್ಕೆ ಎರಡು ಗಂಟೆ ಮುಂಚಿತವಾಗಿ ಕೇಂದ್ರದಲ್ಲಿ ಹಾಜರಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕು ಎಂದರು.

5 ಸದಸ್ಯರ ಫ್ಲೈಯಿಂಗ್ ಸ್ಕ್ವಾಡ್

ಪ್ರತಿ 4ರಿಂದ 5 ಪರೀಕ್ಷಾ ಕೇಂದ್ರಗಳಿಗೆ ಒಂದರಂತೆ ಐವರು ಸದಸ್ಯರ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ದಿನ ಕೇಂದ್ರಗಳ ಪ್ರವೇಶ ದ್ವಾರದಲ್ಲಿ ಪೆÇಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯಿಂದ ಸಂಪೂರ್ಣ ತಪಾಸಣೆ ನಡೆಸಿದ ಬಳಿಕವೇ ಅಭ್ಯರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಜಾಮರ್ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದರು.
ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರ (ಅಡ್ಮಿಟ್ ಕಾರ್ಡ್) ತರಬೇಕು. ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಸಾರಿಗೆ ಸಂಸ್ಥೆ, ಹೆಸ್ಕಾಂ ಹಾಗೂ ಪೆÇಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಖಜಾನೆ ಇಲಾಖೆಯ ಉಪನಿರ್ದೇಶಕ ಆನಂದ ಮುಚ್ಚಂಡಿ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಕೆಕೆಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎ. ಬಿರಾದಾರ, ಪಿಎಸ್‍ಐ ಆರೀಫ್, ತರಬೇತಿದಾರರಾದ ಎಲ್.ಜಿ. ಕುಂಬಾರ, ಜಗದೀಶ ಗುಲಗಂಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಅಧೀಕ್ಷಕರು, ಉಪ ಅಧೀಕ್ಷಕರು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.