Home ಮುಖಪುಟ ಸುದ್ದಿ ಯುವಕರೊಂದಿಗೆ ಪ್ರೀತಿಯಿಂದ ವ್ಯವಹರಿಸಿ

ಯುವಕರೊಂದಿಗೆ ಪ್ರೀತಿಯಿಂದ ವ್ಯವಹರಿಸಿ

ನವದೆಹಲಿ,ಜು೨೫: ದೇಶದ ರಾಜಧಾನಿಯಲ್ಲಿ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಸುದೀರ್ಘ ಹಾಗೂ ಬೃಹತ್ ಪ್ರತಿಭಟನೆಯ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ, ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ನೀಡಿರುವ ಹೇಳಿಕೆ ತೀವ್ರ ಗಮನ ಸೆಳೆದಿದೆ. “ಇಂದಿನ ಯುವ ಪೀಳಿಗೆ ದಾರಿ ತಪ್ಪಿಲ್ಲ. ಅವರಿಗೆ ಆಜ್ಞೆಗಳನ್ನು (ಆದೇಶ) ವಿಧಿಸುವ ಬದಲು ಪ್ರೀತಿಯಿಂದ ವಿವರಿಸಿ, ಮಾತುಕತೆ ಮೂಲಕ ಒಪ್ಪಂದಕ್ಕೆ ಬರಬೇಕಿದೆ,” ಎಂದು ಅವರು ಪ್ರತಿಪಾದಿಸಿದ್ದಾರೆ.


’ವಿಶ್ವ ಮಾಂಗಲ್ಯ ಸಭಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಇಂದಿನ ತಲೆಮಾರಿನ ಯುವಕರನ್ನು ಅರ್ಥಮಾಡಿಕೊಳ್ಳಲು ’ಆಜ್ಞಾಪಿಸುವ’ ಬದಲು ಅರ್ಥಪೂರ್ಣ ’ಚರ್ಚೆ’ ನಡೆಸುವ ಅಗತ್ಯವಿದೆ ಎಂದು ಕರೆ ನೀಡಿದರು.

ನಾವು ಸಣ್ಣವರಿದ್ದಾಗ ಹಿರಿಯರ ಮಾತುಗಳನ್ನು ಕುರುಡಾಗಿ ಪಾಲಿಸುವ ಕಾಲವಿತ್ತು. ಆದರೆ ಇಂದಿನ ಸ್ಥಿತಿ ಹಾಗಿಲ್ಲ. ಇಂದಿನ ಯುವ ಪೀಳಿಗೆ ಪ್ರತಿಯೊಂದನ್ನೂ ಪ್ರಶ್ನಿಸುತ್ತದೆ. ಅವರಿಗೆ ನಾವು ಸರಿಯಾದ ಕಾರಣಗಳನ್ನು ನೀಡಿ ಮನವರಿಕೆ ಮಾಡಿಕೊಡಬೇಕು. ಅವರೊಂದಿಗೆ ಕಾಲ ಕಳೆದು, ಅನ್ಯೋನ್ಯತೆಯಿಂದ ಸಂವಹನ ನಡೆಸಬೇಕು. ಕುಟುಂಬಗಳಲ್ಲಿ ಸಂಭಾಷಣೆಯ ಜಾಗ ಕುಗ್ಗುತ್ತಿರುವುದು ಕಳವಳಕಾರಿ,” ಎಂದು ಭಾಗವತ್ ಅಭಿಪ್ರಾಯಪಟ್ಟರು.

“ಯುವಜನರ ನಂಬಿಕೆ ಗೆಲ್ಲಲು ಆದೇಶಗಳಲ್ಲ, ಸಂವಾದ ಮುಖ್ಯ. ನಮಗೆ ಯಾವುದೇ ’ಡಿಕ್ಟೇಷನ್’ (ಆಜ್ಞೆ) ಬೇಡ, ’ಡಿಸ್ಕಶನ್’ (ಚರ್ಚೆ) ಬೇಕು. ಆಜ್ಞೆಗಳಿಗಿಂತ ಸರ್ವಸಮ್ಮತ ನಿರ್ಧಾರಗಳೇ ಪರಿಹಾರ ನೀಡಬಲ್ಲವು,” ಎಂದು ಅವರು ಸ್ಪಷ್ಟಪಡಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯನ್ನು ಅವರು ನೇರವಾಗಿ ಉಲ್ಲೇಖಿಸದಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (ಅಎP) ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಮತ್ತೊಂದೆಡೆ, ಈ ವಿಷಯದಲ್ಲಿ ಭಾಗವತ್ ಅವರ ಮೌನವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಶ್ನಿಸಿದ್ದರೆ, ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಅವರು, “ಭಾರತ ಬಲಶಾಲಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದನ್ನು ತಡೆಯಲು ದೇಶ-ವಿದೇಶಿ ಶಕ್ತಿಗಳು ಈ ಪ್ರತಿಭಟನೆಯ ಹಿಂದೆ ಕೆಲಸ ಮಾಡುತ್ತಿವೆ,” ಎಂದು ಆರೋಪಿಸಿದ್ದಾರೆ.

ಸರ್ಕಾರ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ನಡುವೆ ಮುಂದಿನ ಸುತ್ತಿನ ಮಾತುಕತೆ ನಡೆಯಲಿದ್ದು, ಭಾಗವತ್ ಅವರ ಈ ’ಸಂವಾದ’ದ ಕರೆ ಸರ್ಕಾರದ ನಡೆ ಹಾಗೂ ಪ್ರತಿಭಟನೆಯ ದಿಕ್ಕಿನ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.