Home ಜಿಲ್ಲೆ ಗ್ಯಾರಂಟಿ ಯೋಜನೆಗಳು ಬಂದ್ ಆಗುವುದಿಲ್ಲ, ಬಿಜೆಪಿ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಜಮಾದಾರ ಮನವಿ

ಗ್ಯಾರಂಟಿ ಯೋಜನೆಗಳು ಬಂದ್ ಆಗುವುದಿಲ್ಲ, ಬಿಜೆಪಿ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಜಮಾದಾರ ಮನವಿ

ಯಾದಗಿರಿ: ಜೂ.19:ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಗ್ಯಾರೆಂಟಿ ಯೋಜನೆಗಳ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೆ ಜನತೆ ಕಿವಿಗೊಡಬಾರದು ಎಂದು ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ ಮೈನುದ್ದಿನ್ ಎಂ. ಜಮಾದಾರ ದೋರನಳ್ಳಿ ಮನವಿ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಪ್ರಮುಖ ಕೊಡುಗೆಯಾಗಿದ್ದು, ಅವುಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಗ್ಯಾರೆಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷ ಬಿಜೆಪಿ ಗ್ಯಾರೆಂಟಿ ಯೋಜನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಗ್ಯಾರೆಂಟಿಗಳು ಬಂದ್ ಆಗುತ್ತವೆ ಎಂಬ ಸುಳ್ಳು ಪ್ರಚಾರವನ್ನು ಜನರು ನಂಬಬಾರದು ಎಂದು ಅವರು ಹೇಳಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಫಲಾನುಭವಿಗಳು ಮೃತಪಟ್ಟಿರುವುದು, ಕೆಲವರು ಬೇರೆಡೆಗೆ ಸ್ಥಳಾಂತರಗೊಂಡಿರುವುದರಿಂದ ಅಂತಹವರ ಹೆಸರಿನಲ್ಲಿ ಕೂಡ ಕೆಲವು ಯೋಜನೆಗಳ ಹಣ ಜಮೆಯಾಗುತ್ತಿದೆ. ಇದನ್ನು ಸರಿಪಡಿಸಲು ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯಬೇಕಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಆದೇಶ ಹೊರಡಿಸಿದ್ದು, ಸರ್ಕಾರ ಜನಪರ ಯೋಜನೆಗಳಿಗೆ ಬದ್ಧವಾಗಿದೆ ಎಂದು ರಾಜ್ ಮೈನುದ್ದಿನ್ ಜಮಾದಾರ ಹೇಳಿದರು.