
ಏಷ್ಯನ್ ಕ್ರೀಡಾಕೂಟ
ನಾಗೋಯಾ (ಜಪಾನ್), ಅ. ೨- ಏಷ್ಯನ್ ಗೇಮ್ಸ್ ೨೦೨೬ರ ಬಿಲ್ಲುವಿದ್ಯೆ (ಆರ್ಚರಿ) ವಿಭಾಗದಲ್ಲಿ ಭಾರತದ ಮಹಿಳಾ ರಿಕರ್ವ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಶುಕ್ರವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ವಿಶ್ವದ ಬಲಶಾಲಿ ಪಡೆ, ಒಲಿಂಪಿಕ್ಸ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ೫-೩ ಸೆಟ್‌ಗಳ ಅಂತರದಿಂದ ಮಣಿಸಿದ ಭಾರತದ ವನಿತೆಯರು ಮೊದಲ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಅಂಕಿತಾ ಭಕತ್, ಕೀರ್ತಿ ಶರ್ಮಾ ಹಾಗೂ ಕುಮ್‌ಕುಮ್ ಮೋಹೋಡ್ ಅವರನ್ನೊಳಗೊಂಡ ಭಾರತೀಯ ಪಡೆ, ಅತ್ಯಂತ ಒತ್ತಡದ ಪಂದ್ಯದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿ ದೇಶಕ್ಕೆ ಹೆಮ್ಮೆ ತಂದಿತ್ತಿದೆ.
ಒಕಾಜಾಕಿ ಚುಒ ಸೊಗೊ ಪಾರ್ಕ್‌ನಲ್ಲಿ ನಡೆದ ಫೈನಲ್ ಪಂದ್ಯದ ಆರಂಭಿಕ ಹಂತಗಳಲ್ಲಿ ಎರಡೂ ತಂಡಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿತ್ತು. ಮೊದಲೆರಡು ಹಂತಗಳ ಮುಕ್ತಾಯಕ್ಕೆ ಉಭಯ ತಂಡಗಳು ೧-೧ ಹಾಗೂ ೨-೨ ಸಮಬಲ ಸಾಧಿಸಿದ್ದವು. ಆದರೆ, ಅಂತಿಮ ಹಾಗೂ ನಿರ್ಣಾಯಕ ಕ್ಷಣಗಳಲ್ಲಿ ಭಾರತದ ಆರ್ಚರ್‌ಗಳು ಸ್ಥಿರ ಪ್ರದರ್ಶನ ನೀಡಿದರು.
ಕೀರ್ತಿ ಶರ್ಮಾ ೧೦ ಅಂಕಗಳ ಗುರಿ ಹೊಡೆಯುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಅಂತಿಮವಾಗಿ ಕುಮ್‌ಕುಮ್ ಮೋಹೋಡ್ ಪರಿಪೂರ್ಣ ‘೧೦’ ಅಂಕ ಗಳಿಸುವ ಮೂಲಕ ಭಾರತದ ಐತಿಹಾಸಿಕ ಗೆಲುವನ್ನು ಖಚಿತಪಡಿಸಿದರು.
ಫೈನಲ್ ತಲುಪುವ ಹಾದಿಯಲ್ಲೂ ಭಾರತ ಭರ್ಜರಿ ಪ್ರದರ್ಶನ ನೀಡಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು ೫-೧ ಅಂತರದಿಂದ ಧೂಳಿಪಟ ಮಾಡಿ ಭಾರತ ತಂಡ ಚಿನ್ನದ ಪದಕದ ಸುತ್ತಿಗೆ ಲಗ್ಗೆ ಇಟ್ಟಿತ್ತು.ಏಷ್ಯನ್ ಗೇಮ್ಸ್‌ನ ಮಹಿಳಾ ರಿಕರ್ವ್ ತಂಡ ವಿಭಾಗದಲ್ಲಿ ಭಾರತ ಫೈನಲ್ ಪ್ರವೇಶಿಸಿದ್ದು ಹಾಗೂ ಸ್ವರ್ಣ ಪದಕ ಗೆದ್ದಿದ್ದು ಇದೇ ಮೊದಲು. ಪ್ರಸ್ತುತ ಭಾರತ ೧೧ ಚಿನ್ನ, ೨೩ ಬೆಳ್ಳಿ ಹಾಗೂ ೩೩ ಕಾಂಸ್ಯ ಪದಕಗಳೊಂದಿಗೆ ಒಟ್ಟು ೬೭ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ೭ನೇ ಸ್ಥಾನದಲ್ಲಿದೆ.
ಚಿನ್ನದ ಕಿರೀಟ

ಇದೇ ವೇಳೆ ಭಾರತದ ತಾರಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ೨೦೨೬ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ೭೫ ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಫೈನಲ್‌ನಲ್ಲಿ ಚೀನಾದ ಬಾವೊ ಜಿಯಿ ಅವರನ್ನು ಏಕಮತದ ತೀರ್ಪಿನಲ್ಲಿ ಮಣಿಸಿದ ಲವ್ಲಿನಾ, ಭಾರತಕ್ಕೆ ಕ್ರೀಡಾಕೂಟದ ೧೨ನೇ ಚಿನ್ನದ ಪದಕ ತಂದುಕೊಟ್ಟರು.
ಫೈನಲ್‌ನ ಆರಂಭದಲ್ಲೇ ಬಾವೊ ಜಿಯಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ನಿರಂತರ ಪಂಚ್‌ಗಳ ಮೂಲಕ ಭಾರತೀಯ ಬಾಕ್ಸರ್ ಮೇಲೆ ಒತ್ತಡ ಹೇರಲು ಯತ್ನಿಸಿದರು. ಆದರೆ ಲವ್ಲಿನಾ ಆತುರಕ್ಕೆ ಒಳಗಾಗದೆ ಸಮರ್ಥವಾಗಿ ಪ್ರತಿದಾಳಿ ನಡೆಸಿದರು. ಇದರ ಫಲವಾಗಿ ಮೊದಲ ಸುತ್ತನ್ನು ೩-೨ ಅಂಕಗಳಿಂದ ತಮ್ಮದಾಗಿಸಿಕೊಂಡರು.
ಎರಡನೇ ಸುತ್ತಿನಲ್ಲೂ ಚೀನಾದ ಬಾಕ್ಸರ್ ಆಕ್ರಮಣಕಾರಿ ತಂತ್ರ ಮುಂದುವರಿಸಿದರು. ಆದರೆ ಮೊದಲ ಸುತ್ತಿನ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಲವ್ಲಿನಾ, ಎದುರಾಳಿಯ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸಮಯೋಚಿತ ಕೌಂಟರ್ ಪಂಚ್‌ಗಳನ್ನು ನೀಡಿದರು. ಪರಿಣಾಮವಾಗಿ ಈ ಸುತ್ತನ್ನು ೪-೧ ಅಂಕಗಳಿಂದ ಗೆದ್ದರು.ಮೂರನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಲವ್ಲಿನಾ, ಅನಗತ್ಯ ಅಪಾಯಕ್ಕೆ ಮುಂದಾಗದೆ ರಕ್ಷಣಾತ್ಮಕವಾಗಿ ಹಾಗೂ ತಂತ್ರಗಾರಿಕೆಯಿಂದ ಬಾಕ್ಸಿಂಗ್ ಮಾಡಿದರು. ಬಾವೊ ಜಿಯಿ ದಾಳಿ ನಡೆಸಲು ಮುಂದಾದಾಗಲೆಲ್ಲ ಸೂಕ್ತ ಸಮಯದಲ್ಲಿ ಪ್ರತಿದಾಳಿ ನಡೆಸಿ ಅಂಕಗಳನ್ನು ಕಲೆಹಾಕಿದರು.
ಮೂರು ಸುತ್ತುಗಳ ಅಂತ್ಯದಲ್ಲಿ ಲವ್ಲಿನಾ ಪರವಾಗಿ ೫-೦ರ ಏಕಮತದ ತೀರ್ಪು ಹೊರಬಂದಿತು. ಇದರೊಂದಿಗೆ ಚೀನಾದ ಬಾಕ್ಸರ್‌ರನ್ನು ಮಣಿಸಿದ ಅವರು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.ಲವ್ಲಿನಾ ಅವರ ಈ ಗೆಲುವು ಭಾರತದ ಬಾಕ್ಸಿಂಗ್‌ಗೆ ಮತ್ತೊಂದು ಮಹತ್ವದ ಸಾಧನೆಯಾಗಿದ್ದು, ೨೦೨೬ರ ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಪದಕದ ಬೇಟೆ ಮುಂದುವರಿದಿದೆ.























