
ವಡಗೇರಾ:ಜೂ.30: ತಾಲೂಕು ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ವಡಗೇರಾ ಪಟ್ಟಣದ ರೈತರು ಧಾರ್ಮಿಕ ಆಚರಣೆಯ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ವರ್ಷದ ಸಂಪ್ರದಾಯದಂತೆ ಪಟ್ಟಣದ ವಿವಿಧ ದೇವಾಲಯಗಳಿಗೆ ನೀರು ಅರ್ಪಿಸಿ ಪೂಜೆ ಸಲ್ಲಿಸಿದ ಬಳಿಕ ರೈತರು ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಆದಿ ಬಸವಣ್ಣ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ಅಂಬಲಿ, ಗೋಧಿ ಸಜ್ಜಕ ಸೇರಿದಂತೆ ವಿವಿಧ ಸಿಹಿ ಖಾದ್ಯಗಳನ್ನು ತಯಾರಿಸಿ ಬಸವಣ್ಣ ಹಾಗೂ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.
ಮಳೆ ಕೊರತೆಯ ಸಂದರ್ಭದಲ್ಲಿ ರೈತರೆಲ್ಲರೂ ಒಗ್ಗೂಡಿ ಬಸವಣ್ಣನಿಗೆ ಪರ್ವ ಆಚರಣೆ ನಡೆಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಹಿರಿಯ ಪ್ರಗತಿಪರ ರೈತರು ಹೇಳಿದರು.
ಪೂಜಾ ಕಾರ್ಯಕ್ರಮದ ಬಳಿಕ ರೈತರು ಹಾಗೂ ಭಕ್ತರು ಅಂಬಲಿ, ಗೋಧಿ ಸಜ್ಜಕವನ್ನು ಸವಿದು ಉತ್ತಮ ಮಳೆ ಸುರಿದು ಭೂಮಿಗೆ ಸಮೃದ್ಧಿ ಬರಲಿ, ರೈತರ ಬೆಳೆಗಳು ಉತ್ತಮವಾಗಲಿ ಎಂದು ಆದಿ ಬಸವಣ್ಣನಲ್ಲಿ ಭಕ್ತಿಭಾವದಿಂದ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ರೈತರು, ಸಾರ್ವಜನಿಕರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.































