Home ಜಿಲ್ಲೆ ಶಿವಮೊಗ್ಗ ಪರಿಸರ ಸಂರಕ್ಷಣೆ ಪ್ರತಿಯೋರ್ವರ ಜವಾಬ್ದಾರಿ

ಪರಿಸರ ಸಂರಕ್ಷಣೆ ಪ್ರತಿಯೋರ್ವರ ಜವಾಬ್ದಾರಿ

ಶಿವಮೊಗ್ಗ, ಜೂ.೬-ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಇದು ಪ್ರತಿಯೋರ್ವರ ಗುರುತರ ಜವಾಬ್ದಾರಿಯಾಗಿದೆ ಎಂದು ಶಿವಮೊಗ್ಗ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೊರವಲಯ ರತ್ನಾಕರ ಲೇಔಟ್ ನ ಉದ್ಯಾನವನದಲ್ಲಿ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಾಪೂಜಿ ವಿದ್ಯಾ ಸಂಸ್ಥೆ ಹಾಗೂ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಗಿಡಗಳನ್ನು ನೆಡುವುದು ಕೇವಲ ತೋರ್ಪಡಿಕೆಯಾಗಬಾರದು. ನೆಟ್ಟ ಗಿಡಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ಬೆಳೆಸಬೇಕು. ಅರಣ್ಯ ವಿನಾಶ ತಡೆಗಟ್ಟಬೇಕು. ಪರಿಸರ ಮಾಲಿನ್ಯಕ್ಕ ಕಡಿವಾಣ ಹಾಕಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಬರಲಿದೆ ಎಂದು ತಿಳಿಸಿದರು.

ಅಬ್ಬಲಗೆರೆ ಗ್ರಾಪಂ ಪಿಡಿಓ ಹೆಚ್ ರಾಜಪ್ಪ ಅವರು ಮಾತನಾಡಿ, ಪರಿಸರ ನಮ್ಮೆಲ್ಲರ ಉಸಿರಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅಬ್ಬಲಗೆರೆ ಗ್ರಾಪಂ ಆಡಳಿತವು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಂ ಪಿ ಆರಾಧ್ಯ, ಕೆ ವಿಶ್ವಾರಾಧ್ಯ ವಹಿಸಿದ್ದರು. ಸಂಸ್ಥೆಯ ಡಾ ಶೀಲಾ ಎನ್ ಬಿ, ಡಾ ಕವಿತಾ ಎಸ್ ಡಿ, ಡಾ ನಿರಂಜನ್ ಕುಮಾರ್, ಶೋಭಾ ಮಣಿ ಸಿ ಪಿ, ಡಾ ರಾಜಶೇಖರ್ ಎಂ ಎನ್, ಸ್ವಪ್ನಾ ಎಸ್, ಡಾ ವಿವೇಕಾನಂದ, ರಕ್ಷಿತ್ ಬಿ ಎಸ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.