
ತಾಳಿಕೋಟೆ:ಜು.3:ವೈದ್ಯಕೀಯ ಸೇವೆಯಲ್ಲಿ ಮುನ್ನಡೆದಂತಹ ವೈದ್ಯರು ರೋಗಿಗಳ ಮನಸ್ಥಿತಿಯನ್ನು ಅರಿಯುವ ಮೂಲಕ ಚಿಕಿತ್ಸೆ ನೀಡಿ ಗುಣಮುಖ ಮಾಡುತ್ತಾ ಸಾಗುವದರೊಂದಿಗೆ ಹೆಸರು ಗಳಿಸುವಂತಹ ಕಾರ್ಯ ಮಾಡಬೇಕೆಂದು ಸ್ಥಳೀಯ ಖ್ಯಾತ ವೈದ್ಯರು ತಾಳಿಕೋಟೆ ವೈದ್ಯಕೀಯ ಅಸೋಶಿಯೇಷನ್ ಅಧ್ಯಕ್ಷರಾದ ಡಾ. ಎ. ನಾಲಬಂದ ಅವರು ನುಡಿದರು.
ಇತ್ತೀಚೆಗೆ ತಾಳಿಕೋಟೆಯ ವೈದ್ಯಕೀಯ ಅಸೋಸಿಯೇಷನ್ ವತಿಯಿಂದ ನೂತನ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ವೈದ್ಯರಾದವರು ಧನದಾಹಿಯಾಗದೇ ವೃತ್ತಿಧರ್ಮವನ್ನು ಪಾಲಿಸುತ್ತಾ ಸಾಗಿದ್ದ ನಮ್ಮ ಭಾಗದ ವೈದ್ಯರ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು. ಬಡಬಗ್ಗರು ಎನ್ನುವಂತವರು ಆಸ್ಪತ್ರೆಗೆ ರೋಗ ತಪಾಸಣೆಗೆ ಆಗಮಿಸಿದಾಗ ಅವರಲ್ಲಿರುವಂತಹ ತೊಂದರೆ ಲಕ್ಷಿಸಿ ಸಹಕಾರ ಮನೋಭಾವನೆಯನ್ನು ನಮ್ಮ ಅಸೋಸಿಯೇಷನ್ ವೈದ್ಯರ ತಂಡ ತೋರುತ್ತಾ ಸಾಗಿಬಂದಿದೆ ಎಂದು ಗುಣಗಾನ ಮಾಡಿದ ಅವರು ಅಸೋಸಿಯೇಶನ್ ಕಚೇರಿ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳಿಗೆ ನಿವೇಶನ್ ಒದಗಿಸಿಕೊಡುವ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ ಈ ಕಾರ್ಯಕ್ಕೆ ಎಲ್ಲ ವೈದ್ಯರು ಕೈ ಜೋಡಿಸಬೇಕೆಂದು ಅವರು ಹೇಳಿದರು.
ಇನ್ನೋರ್ವ ಖ್ಯಾತ ವೈದ್ಯರು ಅಸೋಸಿಯೇಶನ್ ಗೌರವಾಧ್ಯಕ್ಷರಾದ ಡಾ. ವಿಜಯಕುಮಾರ ಕಾರ್ಚಿ ಅವರು ಮಾತನಾಡಿ ಕಳೆದ 18 ವರ್ಷಗಳಿಂದ ಚಿಕ್ಕಮಕ್ಕಳ ತಜ್ಞವೈದ್ಯರಾಗಿ ಸೇವೆಸಲ್ಲಿಸುತ್ತಾ ತಾಳಿಕೋಟೆಯಲ್ಲಿ ಸಾಗಿಬಂದಿದ್ದ ಡಾ. ಆನಂದ ಭಟ್, ಹಾಗೂ ಅವರ ಧರ್ಮಪತ್ನಿ ಒಳಗೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಹೆಸರು ಗಳಿಸಿದ್ದಾರೆ ಕಳೆದ 25 ವರ್ಷಗಳಿಂದ ಅಸೋಸಿಯೇಷನ್ ದಲ್ಲಿ ಸುಮಾರು 60 ವೈದ್ಯರು ಒಳಗೊಂಡಿದ್ದು ಅವರೆಲ್ಲರ ಸೇವಾಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.
ಇದೇ ಸಮಯದಲ್ಲಿ ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ಆನಂದ ಭಟ್ ದಂಪತಿಗಳಿಗೆ ಸನ್ಮಾನಿಸಿ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಅಸೋಶಿಯೇಶನ್ ಖಜಾಂಚಿಯಾದ ಡಾ. ಸುವರ್ಣಾ ಸಲ್ಲೊಡಗಿ ಅವರು ಪ್ರಾಸ್ತಾವಿಕ ಮಾತನಾಡಿ ವರದಿ ವಾಚಿಸಿದರು.
ಈ ಸಮಯದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳಾದ ಡಾ. ಶ್ರೀಶೈಲ ಹುಕ್ಕೇರಿ, ಹಾಗೂ ಡಾ. ರವಿ ಅಗರವಾಲಾ, ಸನ್ಮಾನಿತರಾದ ಡಾ. ಆನಂದ ಭಟ್ ಅವರು ತಮ್ಮ ಹಾಗೂ ತಾವು ಸಾಗಿಸುತ್ತಾ ಸಾಗಿಬಂದಿರುವ ಸೇವಾ ಕಾರ್ಯಗಳ ಕುರಿತು ವಿವರಿಸಿದರು.
ಈ ಸಮಯದಲ್ಲಿ ಮಹಿಳಾ ತಜ್ಞವೈದ್ಯರಾದ ಡಾ. ಸರೋಜಾ ಕಾರ್ಚಿ, ಡಾ. ಗಂಗಾಂಬಿಕಾ, ಕಾರ್ಯದರ್ಶಿಗಳಾದ ಡಾ. ವ್ಹಿ.ವ್ಹಿ. ಅಮಲ್ಯಾಳ, ಸಹಕಾರ್ಯದರ್ಶಿ ಡಾ. ಶಾಂತಾ ಇಬ್ರಾಹಿಂಪೂರ, ಡಾ. ಪ್ರೀಯಾ ಭಟ್, ಅಸೋಸಿಯೇಶನ್ ಪದಾಧಿಕಾರಿಗಳು ಮೊದಲಾದವರು ಉಪಸ್ತಿತರಿದ್ದರು.





























