
ಸೈದಾಪುರ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸಿ ಸೈದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಕೇಂದ್ರ ಚುನಾವಣಾ ಆಯೋಗದ ಕ್ರಮಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬೀಡÀದಂತೆ ಪಾರದರ್ಶಕವಾಗಿ ಪರಿಷ್ಕರಣೆ ನಡೆಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಮತದಾನ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಈ ಪ್ರಕ್ರಿಯೆಯಿಂದ ಯಾವುದೇ ಅರ್ಹ ಮತದಾರರು ಹಕ್ಕು ಕಳೆದುಕೊಳ್ಳಬಾರದು ಎಂದರು. ದಾಖಲೆಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಹೆಸರುಗಳನ್ನು ಕೈಬಿಡುವ ಮುನ್ನ ಸಂಬಂಧಿಸಿದವರಿಗೆ ಮಾಹಿತಿ ನೀಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಪರಿಷ್ಕರಣೆ ಕುರಿತು ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಕೆಪಿಸಿಸಿ ಸದಸ್ಯ ಚಂದ್ರಶೇಖರ ವಾರದ್, ಮಾಜಿ ತಾಪಂ ಸದಸ್ಯ ಸಣ್ಣ ಹಣಮಂತ ಬಳಿಚಕ್ರ, ಸುದರ್ಶನ ಪಾಟೀಲ್ ಜೇಗ್ರಾಂ, ರಮೇಶ ಭೀಮನಹಳ್ಳಿ, ಬನ್ನಪ್ಪ ಹುಲಿಬೆಟ್ಟ, ಚಂದ್ರಶೇಖರ ಕಾವಲಿ ಬಾಡಿಯಾಳ, ಸಾಬಣ್ಣ ಸೈದಾಪುರ, ಅನೀಲಕುಮಾರ, ಬಾಗಪ್ಪ ಇಂದ್ರನಗರ, ಕಾಶಪ್ಪ ಚಿನ್ನಕಾರ್, ಪೀರೋಜ್ ಕಡೆಚೂರು, ಮರೆಪ್ಪ ಕಟ್ಟಿಮನಿ, ವಿರೇಶ ಸಜ್ಜನ್, ಅಂಜನೇಯ ರಾಂಪೂರ, ತಿಮ್ಮಣ್ಣ ಬೆಳಗುಂದಿ, ವಿಜಯ ಕಂದಳ್ಳಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.























