Home ಜಿಲ್ಲೆ ಅಂಗವಿಕಲರ, ವಿಧವಾ ಹಾಗೂ ವೃದ್ಧಾಪ್ಯ ವೇತನದ ಆದಾಯ ಮಿತಿ 1.20 ಲಕ್ಷ ರೂ.ಗೆ ಹೆಚ್ಚಿಸಲು ಆಗ್ರಹ

ಅಂಗವಿಕಲರ, ವಿಧವಾ ಹಾಗೂ ವೃದ್ಧಾಪ್ಯ ವೇತನದ ಆದಾಯ ಮಿತಿ 1.20 ಲಕ್ಷ ರೂ.ಗೆ ಹೆಚ್ಚಿಸಲು ಆಗ್ರಹ

ಬೀದರ್:ಜು.1: ಅಂಗವಿಕಲರು, ವಿಧವೆಯರು ಹಾಗೂ ವೃದ್ಧರ ಮಾಸಾಶನ ಪಡೆಯಲು ಇರುವ ಆದಾಯ ಮಿತಿಯನ್ನು 1,20,000 ರೂಪಾಯಿಗಳಿಗೆ ಹೆಚ್ಚಿಸಬೇಕು ಹಾಗೂ ಪ್ರತ್ಯೇಕ ‘ಅಂಗವಿಕಲರ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು ಎಂದು ಆಗ್ರಹಿಸಿ ‘ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ’ಯು ಸೋಮವಾರ ಬೀದರ್ ತಹಸೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ರಾಜ್ಯ ಸರ್ಕಾರವು ಮಾಸಾಶನ ಪಡೆಯಲು 32,000 ರೂ.ಗಳ ಆದಾಯ ಮಿತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿರುವುದರಿಂದ ಲಕ್ಷಾಂತರ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗಿದೆ. ಈ ದಿಢೀರ್ ಆದೇಶದಿಂದಾಗಿ ಬಿಪಿ, ಶುಗರ್‍ನಂತಹ ಕಾಯಿಲೆಗಳಿಗೆ ಔಷಧಿ ಖರೀದಿಸಲು ಹಾಗೂ ದೈನಂದಿನ ಜೀವನ ಸಾಗಿಸಲು ಸಂಪೂರ್ಣವಾಗಿ ಮಾಸಾಶನವನ್ನೇ ಅವಲಂಬಿಸಿದ್ದ ವೃದ್ಧರು, ವಿಧವೆಯರು ಮತ್ತು ಅಂಗವಿಕಲರು ಪರದಾಡುವಂತಾಗಿದೆ. ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.

ಆದ್ದರಿಂದ, ಸರ್ಕಾರ ಕೂಡಲೇ 32 ಸಾವಿರ ರೂ. ಆದಾಯ ಮಿತಿಯ ಆದೇಶವನ್ನು ರದ್ದುಗೊಳಿಸಿ, ಅದನ್ನು 1,20,000 ರೂ.ಗಳಿಗೆ ಹೆಚ್ಚಿಸಬೇಕು. ಇದರಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದರೊಂದಿಗೆ ರಾಜ್ಯ ಹಾಗೂ ಪ್ರತಿ ಜಿಲ್ಲಾ ಮಟ್ಟದಲ್ಲಿ ‘ಅಂಗವಿಕಲರ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಸಮಿತಿಯ ಈ ಮನವಿಯನ್ನು ಬೀದರ್ ತಹಸೀಲ್ದಾರ್ ಅವರ ಮುಖಾಂತರ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರಿಗೆ ರವಾನಿಸಲಾಗಿದೆ.

ಸಮಿತಿಯ ಕಲ್ಯಾಣ ಕರ್ನಾಟಕ ಕಲಬುರಗಿ ವಿಭಾಗದ ಅಧ್ಯಕ್ಷರಾದ ಸಂಗಮೇಶ ಭಾವಿದೊಡ್ಡಿ, ಅಂಗವಿಕಲ ಘಟಕದ ರಾಜ್ಯಾಧ್ಯಕ್ಷೆ ಮಂಗಲಾ ಮರ್ಕಲೆ, ಜಿಲ್ಲಾ ಕಾರ್ಯಾಧ್ಯಕ್ಷ ಶಿವಕುಮಾರ ಶಹಾಪೂರೆ, ಜಿಲ್ಲಾ ಕಾರ್ಯದರ್ಶಿ ಎಂ.ಡಿ. ಸಿರಾಜ್ ಹಾಗೂ ಸದಸ್ಯರುಗಳಾದ ಶ್ರೀಕಾಂತ ಡೋಣೆ, ಕವಿತಾ ಡೋಣೆ, ಜಗದೇವಿ, ವೀರಶೆಟ್ಟಿ ಕೌಡಗೆ, ಬೀರಗೊಂಡ, ಮತ್ತು ರಂಗಮ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು