
ಕಲಬುರಗಿ,ಜು.25-ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಎಫ್‍ಕೆಸಿಸಿಐ) ವತಿಯಿಂದ ಬೆಂಗಳೂರಿನಲ್ಲಿ ಜುಲೈ 24 ರಂದು ಆಯೋಜಿಸಲಾದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯರಾದ ಗೋವಿಂದ ರೆಡ್ಡಿ ಅವರೊಂದಿಗೆ ನಡೆದ ಸಂವಾದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಸಕ್ರಿಯವಾಗಿ ಭಾಗವಹಿಸಿ, ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆಗಳು ಹಾಗೂ ಎಂಎಸ್‍ಎಂಇ ವಲಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಸಮಗ್ರ ಮನವಿಪತ್ರವನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷರಾದ ಶರಣಬಸಪ್ಪ ಎಂ. ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ್ ವಿ.ಇಂಗಿನಶೆಟ್ಟಿ, ಕೈಗಾರಿಕೆ ಹಾಗೂ ಎಂಎಸ್‍ಎಂಇ ಸಮಿತಿಯ ಸಂಚಾಲಕರಾದ ಅಭಿಜಿತ್ ಪಡಶೆಟ್ಟಿ ಹಾಗೂ
ಸಂತೋಷ್ ಸುರೇಶ್ ನಂದ್ಯಾಳ ಅವರು ಭಾಗವಹಿಸಿ, ಎಫ್‍ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಅವರ ಸಮ್ಮುಖದಲ್ಲಿ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಐಎಎಸ್ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು.
ಕಲಬುರಗಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್‍ನ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಗತ್ಯ ಮೂಲಸೌಕರ್ಯ ಹಾಗೂ ಅನುಮೋದನೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಕೆಐಎಡಿಬಿಗೆ ನಿರ್ದೇಶನ ನೀಡಬೇಕು, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿನ ಬಾಕಿ ಉಳಿದಿರುವ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು, ಭೂಮಿಗೆ ಸಂಬಂಧಿಸಿದ ಸಣ್ಣಪುಟ್ಟ ಬದಲಾವಣೆಗಳು ಹಾಗೂ ಆಡಳಿತಾತ್ಮಕ ಅನುಮೋದನೆಗಳಿಗೆ ಜಿಲ್ಲಾ ಮಟ್ಟದ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಬೇಕು, ಪ್ರಕ್ರಿಯಾತ್ಮಕ ವಿಳಂಬದಿಂದ ಸಂಕಷ್ಟದಲ್ಲಿರುವ ಕೈಗಾರಿಕಾ ನಿವೇಶನಗಳಿಗೆ ಎರಡು ವರ್ಷಗಳ ಅವಧಿ ವಿಸ್ತರಣೆ ನೀಡಬೇಕು, ಜಿಲ್ಲಾ ಮಟ್ಟದ ಏಕಗವಾಕ್ಷಿ ಯೋಜನಾ ಅನುಮೋದನೆಗಳ ಮಿತಿಯನ್ನು ಹಾಗೂ ಭೂಮಿ ಹಂಚಿಕೆ ಮಿತಿಯನ್ನು ಹೆಚ್ಚಿಸಬೇಕು, ಕೈಗಾರಿಕೆಗಳಿಗೆ ಬಾಕಿ ಉಳಿದಿರುವ ಬಂಡವಾಳ ಸಹಾಯಧನ (ಅಚಿಠಿiಣಚಿಟ Subsiಜಥಿ) ಅನ್ನು ಶೀಘ್ರ ಬಿಡುಗಡೆ ಮಾಡಬೇಕು, ಕಪನೂರ ಕೈಗಾರಿಕಾ ಪ್ರದೇಶ (ಹಂತ-1) ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು,ಕೈಗಾರಿಕೆಗಳಿಗೆ ಅಗತ್ಯವಾದ ಕೈಗಾರಿಕಾ ನೀರಿನ ಸರಬರಾಜು ವ್ಯವಸ್ಥೆಯನ್ನು ಶೀಘ್ರ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಪ್ರತಿಕ್ರಿಯಿಸಿದ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಐಎಎಸ್, ಕಲಬುರಗಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್‍ನ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 400 ಕೋಟಿ ಅನುದಾನ ಈಗಾಗಲೇ ಮಂಜೂರಾಗಿದ್ದು, ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಕೆಕೆಸಿಸಿಐ ನಿಯೋಗಕ್ಕೆ ಭರವಸೆ ನೀಡಿದರು. ಅಲ್ಲದೆ, ಕೆಕೆಸಿಸಿಐ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ರೀತಿಯ ನೇರ ಸಂವಾದದ ಮೂಲಕ ಕೈಗಾರಿಕೆಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಅವಕಾಶ ಕಲ್ಪಿಸಿದ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಐಎಎಸ್, ಹಾಗೂ ಎಫ್‍ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಅವರಿಗೆ ಕೆಕೆಸಿಸಿಐ ಕೃತಜ್ಞತೆ ಸಲ್ಲಿಸಿತು.































