Home ಮುಖಪುಟ ಸುದ್ದಿ ಶಕ್ತಿ ಸೌಧಕ್ಕೆ ಮುತ್ತಿಗೆ ಯತ್ನ : ಬಿಜೆಪಿ ನಾಯಕರು ವಶಕ್ಕೆ

ಶಕ್ತಿ ಸೌಧಕ್ಕೆ ಮುತ್ತಿಗೆ ಯತ್ನ : ಬಿಜೆಪಿ ನಾಯಕರು ವಶಕ್ಕೆ

ಬೆಂಗಳೂರು.ಆ.೨೪- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ತಮ್ಮ ಹೋರಾಟ ತೀವ್ರಗೊಳಿಸಿದ್ದು, ವಿಪಕ್ಷ ನಾಯಕ ಆರ್. ಆಶೋಕ್ , ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು.


ವಿಕಾಸಸೌಧ ಗೇಟ್ ಮುಂಭಾಗದ ರಸ್ತೆಯಲ್ಲಿಯೇ ಕುಳಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,ಸಿಟಿ ರವಿ, ಎನ್.ರವಿಕುಮಾರ್ ಸೇರಿದಂತೆ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿಧಾನಸೌಧದತ್ತ ನುಗ್ಗಲು ಯತ್ನಿಸಿದರು.ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ನಾಯಕರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ಗಳಲ್ಲಿ ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು.


ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಏಕಕಾಲಕ್ಕೆ ಮೂರು ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿತ್ತು.ಅದರಂತೆ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಹಲವು ನಾಯಕರಿದ್ದ ತಂಡ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿದರೇ ಇನ್ನುಳಿದ ಸಿ.ಟಿ.ರವಿ ಹಾಗೂ ಬಿ.ವೈ.ವಿಜಯೇಂದ್ರ ನೇತೃತ್ವದ ಎರಡು ತಂಡಗಳು ವಿಧಾನಸೌಧದ ಪ್ರಮುಖ ಗೇಟ್‌ಗಳ ಬಳಿ ಏಕಾಏಕಿ ಮುತ್ತಿಗೆ ಹಾಕಲು ಯತ್ನಿಸಿದವು.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರತಿಭಟನಾಕಾರರನ್ನು ಕೊಂಡೊಯ್ಯಲು ಬಿಎಂಟಿಸಿ ಬಸ್‌ಗಳನ್ನು ಸ್ಥಳದಲ್ಲಿ ಕಾಯ್ದಿರಿಸಲಾಗಿತ್ತು.


ಪ್ರತಿಭಟನೆ ತೀವ್ರಗೊಳ್ಳುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಗರ ಪೊಲೀಸರು ವಿಧಾನಸೌಧ ಹಾಗೂ ಫ್ರೀಡಂ ಪಾರ್ಕ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಪ್ರತಿಭಟನಾಕಾರರನ್ನು ತಕ್ಷಣವೇ ವಶಕ್ಕೆ ಪಡೆಯಲು ಸ್ಥಳದಲ್ಲಿ ಸಾಲು ಸಾಲು ಬಿಎಂಟಿಸಿ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.


ಅಲ್ಲದೆ,ಬಿಜೆಪಿ ನಾಯಕರು ಮುತ್ತಿಗೆ ಯತ್ನದಿಂದಾಗಿ ವಿಧಾನಸೌಧದ ಸುತ್ತಮುತ್ತ ತೀವ್ರ ಸಂಚಾರ ದಟ್ಟಣೆ ಉಂಟಾಯಿತು.ವಿಶೇಷವಾಗಿ ಶಾಸಕರು ಪ್ರವೇಶಿಸುವ ದ್ವಾರದ ಬಳಿ ವಾಹನ ಸವಾರರು ಹಾಗೂ ಜನಸಾಮಾನ್ಯರು ಪರದಾಡುವಂತಾಯಿತು.