
ಕಲಬುರಗಿ,ಆ.24-ನಗರದ ಪ್ರತಿಷ್ಠಿತ ಸಮತಾ ಕಾಲೋನಿ ಬಡಾವಣೆಗಯ ಭಾಗವಾದ ಧನಗರ್ ಗಲ್ಲಿಯಲ್ಲಿರುವ ಕುರುಬ ಸಮಾಜದ ಆರಾಧ್ಯ ದೈವ ರೇವಣಸಿದ್ದೇಶ್ವರ ಕೋರಿಮಠದಲ್ಲಿರುವ ವಿದ್ಯಾವರ್ಧಕ ಸಂಘದ ಅಡಿಯ ಶಾಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಹಾಲುಮತದ ಧರ್ಮದ ನಡೆಯುತ್ತಿರುವ ಏಳುಕೋಟಿ ಯಲ್ಲಾಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ವಿನೋದಕುಮಾರ ಜೆನವೇರಿ ಅವರು ಭೇಟಿ ಮಾಡಿ ವಿವಿಧ ಬೇಡಿಕೆಗಳ ಕುರಿತು ಮನವರಿಕೆ ಮಾಡಿದರು.
ವಿಶೇಷವಾಗಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ದಿನಾಂಕವನ್ನು ತಿದ್ದುಪಡಿ ಮಾಡುವ ಕುರಿತು ಹಾಗೂ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಪದ್ಧತಿಗೆ ಸಂಬಂಧಿಸಿದ ಸಂವಿಧಾನದ 171(3) ನೇ ವಿಧಿಗೆ ಅಗತ್ಯ ತಿದ್ದುಪಡಿ ತರುವ ಬಗ್ಗೆ ಮನವಿ ಸಲ್ಲಿಸಿ, ಸರ್ಕಾರದ ಗಮನ ಸೆಳೆಯುವಂತೆ ಕೋರಿದರು.
ಈ ಸಂದರ್ಭದಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಕಳೆದ ತಿಂಗಳು, ಕನ್ನಡ ಭವನದಲ್ಲಿ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನೀಡಿದ್ದ ಮನವಿ ಅರ್ಜಿಗೆ ಸಂಬಂಧಿಸಿದಂತೆ ಈಗಾಗಲೇ ಡಿಪಿಎಆರ್ಗೆ ಪತ್ರ ಬರೆದು ವಿವರಣೆ ಕೇಳಲಾಗಿದೆ. ಅಲ್ಲದೇ ಈ ವಿಷಯವನ್ನು ಸಚಿವ ಸಂಪುಟದ ಗಮನಕ್ಕೆ ತರಲು ಈ ಭಾಗದ ಸಚಿವರ ಅಭಿಪ್ರಾಯವನ್ನು ಕೋರಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತಂದು, ಮುಂದಿನ ತಿಂಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಕುರಿತು ಚರ್ಚೆ ವಿಷಯ ಬಂದಾಗ ಈ ಬೇಡಿಕೆಗಳ ಬಗ್ಗೆ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಈ ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಹಾಗೂ ಮಾಜಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ರೇವಣಸಿದ್ಧಪ್ಪ ಸಾತನೂರ, ವಿಟಿಯು ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕೌಲಗಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ್ ಗುತ್ತೇದಾರ, ವಕೀಲರಾದ ನಾಗೇಂದ್ರಪ್ಪ ಪೂಜಾರಿ, ರವೀಂದ್ರ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






























